ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶ ವಿಭಜಕ ಶಕ್ತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಜಾಗೃತರಾಗಬೇಕು. ಭಾರತದ ಏಕತೆ, ಪರಂಪರೆ, ಸಂಸ್ಕೃತಿ, ಸಮಗ್ರತೆ ಹಾಗೂ ಸಂವಿಧಾನದ ಬಗ್ಗೆ ತಿಳಿಕೊಳ್ಳುವ ಕಾರ್ಯ ಮಾಡಬೇಕು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.
ಅವರು ಪಟ್ಟಣದ ಬಿ.ಸಿ.ಎನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಎಬಿವಿಪಿಯ ಧಾರವಾಡ ವಿಭಾಗದ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ರಾಜಕೀಯ ಕಾರಣಕ್ಕಾಗಿ ನ್ಯಾಯಾಂಗ, ಚುನಾವಣೆ ಆಯೋಗ, ಸಂಸತ್ತು ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ಮೂಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಶೋಚನೀಯ ಸಂಗತಿ. ಇಂದಿನ ಯುವ ಸಮುದಾಯವನ್ನು ಸ್ಕ್ರೀನ್ ಟೈಮ್‌ನಿಂದ ಗ್ರೀನ್ ಟೈಮ್‌ಗೆ ತರುವ ಅವಶ್ಯಕತೆ ಇದೆ. ಕ್ರೀಡೆ, ಶಿಕ್ಷಣ, ರಾಷ್ಟ್ರೀಯತೆಯ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸಬೇಕು. ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್, ಗುಟ್ಕಾ, ಗಾಂಜಾಗಳಿಗೆ ಬಲಿಯಾಗಬಾರದು. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಬಿವಿಪಿಯಿಂದ ಜಾಗೃತಿ ಅಭಿಯಾನವನ್ನು ಮಾಡಬೇಕು. ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ವಿಶ್ವವಿದ್ಯಾಲಯಗಳಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಎಬಿವಿಪಿ ಗದಗ ಜಿಲ್ಲಾ ಪ್ರಮುಖರಾದ ಪುನೀತ ಬೇನಕನವಾರಿ ಮಾತನಾಡಿ, ಭಾರತದ ಕೆಲವು ವಿಶ್ವವಿದ್ಯಾಲಯಗಳಲ್ಲಿ ದೇಶದ ವಿರುದ್ಧ ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ದೇಶದ್ರೋಹಿ ಘೋಷಣೆಗಳನ್ನು ಕೂಗುವ ಷಡ್ಯಂತ್ರ ಮಾಡುತ್ತಿದ್ದು, ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ರಾಷ್ಟ್ರ ಕಟ್ಟುವ ಶಕ್ತಿ ಅಂದರೆ ಅದು ವಿದ್ಯಾರ್ಥಿ ಶಕ್ತಿ. ಅದನ್ನು ಎಬಿವಿಪಿ ಸಾರ್ಥಕವಾಗಿ ಮಾಡುತ್ತಿದೆ. ದೇಶ ದ್ರೋಹದ ಘೋಷಣೆ ಕೂಗುವವರ ವಿರುದ್ಧ ಗಟ್ಟಿ ಧ್ವನಿಯಾಗಿ ಹೋರಾಟ ಮಾಡುತ್ತಿದೆ, ದೇಶವನ್ನು ಗಟ್ಟಿಗೊಳಿಸುವಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಧಾರವಾಡ ನಗರ ಸಹ ಕಾರ್ಯದರ್ಶಿ ವಿಜಯಲಕ್ಷ್ಮೀ ಮಾನೆ, ಶಂಕರ ಕುಂದಗೋಳ, ಜಿಲ್ಲಾ ಸಂಚಾಲಕ ಪ್ರಕಾಶ ಕುಂಬಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ಉಮಚಗಿ, ತಾಲೂಕು ಸಂಚಾಲಕ ವಿನಾಯಕ ಕುಂಬಾರ, ಸಹ ಸಂಚಾಲಕಿ ಸಂಜನಾ ಪಾಟೀಲ ಹಾಗೂ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ಅಭ್ಯಾಸ ವರ್ಗ ನಡೆಯಲಿದ್ದು, ಮೂರು ಜಿಲ್ಲೆಗಳಿಂದ 150 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡಮನಿ ಮಾತನಾಡಿ, ಎಬಿವಿಪಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆಯಾಗಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು, ಸುಮಾರು 75 ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ಹೊಂದಿರುವ ಏಕೈಕ ವಿದ್ಯಾರ್ಥಿ ಸಂಘಟನೆ ಎಬಿವಿಪಿಯಾಗಿದೆ. ಬೇರೆ ಯಾವ ದೇಶಗಳಲ್ಲಿಯೂ ಇಂತಹ ಬಲಿಷ್ಠ ವಿದ್ಯಾರ್ಥಿ ಸಂಘಟನೆಗಳಿಲ್ಲ ಎಂದರು.



