ಬೆಂಗಳೂರು: ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಅಂಶಗಳನ್ನು ಹೇಳಿ ರಾಜ್ಯದ ಬಡವರ ಕೂಲಿಕಾರರ ದಾರಿ ತಪ್ಪಿಸುತ್ತಿದೆ. ಹಿಂದಿನ ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಈಗ 125 ದಿನಗಳಿಗೆ ಹೆಚ್ಚಿಗೆ ಮಾಡಿದೆ.
ಈ 125 ದಿನಗಳನ್ನು ಗ್ರಾಮ ಪಂಚಾಯತಿಗಳೇ ನಿರ್ಧಾರ ಮಾಡಬಹುದು. ಆದರೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂಬ ಭೀತಿಯನ್ನು ಕಾರ್ಮಿಕರಲ್ಲಿ ಹುಟ್ಟಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ರೈತರಿಗೆ ಅನುಕೂಲವಾಗಲು ಆರವತ್ತು ದಿನ ಕಾಲ ಕೃಷಿಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ದೃಷ್ಡಿಯಿಂದ ವರ್ಷದಲ್ಲಿ ಎರಡು ಬಾರಿ ಉದ್ಯೋಗ ಖಾತ್ರಿಯ ಕೆಲಸಗಳನ್ನು ಕೃಷಿಗೋಸ್ಕರ ರಜೆ ನೀಡಲಾಗಿದೆ.
ಇದನ್ನು ರಾಜ್ಯ ಸರ್ಕಾರ ಆಕ್ಷೇಪ ಮಾಡುವ ಮುಖಾಂತರ ರೈತ ವಿರೋಧಿ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ. ಇದು ಇಡೀ ದೇಶದ ರೈತರಿಂದ ಬೇಡಿಕೆಯ ಅನುಗುಣವಾಗಿದೆ. ಅಲ್ಲದೇ ಹೇಗಿದ್ದರೂ ವರ್ಷದಲ್ಲಿ 125 ದಿನ ಬಿಟ್ಟರೆ ಬೇರೆ ದಿನದಲ್ಲಿ ಬೇರೆ ರಂಗದಲ್ಲಿ ಕೆಲಸ ಮಾಡುವುದು ಅನಿವಾರ್ಯವಿದೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರ ತಡೆ
ಜಿ ರಾಮ್ ಜಿ ಯೋಜನೆಯಲ್ಲಿ ಒಂದು ವಾರದಿಂದ ಹದಿನೈದು ದಿನಗಳ ಒಳಗೆ ಕಡ್ಡಾಯವಾಗಿ ಕಾರ್ಮಿಕರ ವೇತನ ಕೊಡುವ ಬಗ್ಗೆ ಸ್ಪಷ್ಟವಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಅನುದಾನ ಸಿಗದೇ ಇರುವ ವಿಚಾರವನ್ನು ಹೇಳಿ ಕಾರ್ಮಿಕರಿಗೆ ಈ ಯೋಜನೆಯಿಂದ ದೂರ ಮಾಡುತ್ತಿದೆ.
ನರೇಗಾ ಯೋಜನೆಯಲ್ಲಿ ಹಲವಾರು ಪ್ರಕರಣಗಳು ಭ್ರಷ್ಟಾಚಾರದಿಂದ ಕೂಡಿರುವುದು ಯೋಜನೆಯ ದುರ್ಬಳಕೆ ಆಗಿರುವುದು. ಸುಳ್ಳು ಕೂಲಿಕಾರರ ಹೆಸರು ಹೇಳಿ ವೇತನ ತೆಗೆದಿರುವ ಲೋಪ ಇದ್ದು ಅದನ್ನು ಸರಿಪಡಿಸಲು ಬಯೊಮೆಟ್ರಿಕ್ ತಂತ್ರಜ್ಞಾನ ಬಳಸಿ ಸೋರಿಕೆ ತಡೆಗಟ್ಟಲು ಯೋಜನೆ ಮಾಡಿದರೆ ಇದರಿಂದ ವಂಚನೆ ಆಗುತ್ತದೆ ಎಂದು ಸುಳ್ಳನ್ನು ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.



