ಹಾವೇರಿ: ರಾಜ್ಯ ಸರ್ಕಾರ ಭಯದಿಂದ ತಮ್ಮ ಯಾವುದೇ ಹಗರಣಗಳನ್ನು ಸಿಬಿಐಗೆ ನೀಡುತ್ತಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಹಾವೇರಿ ಶಿಗ್ಗಾಂವಿ ಮತಕ್ಷೇತ್ರ ಹುಲುಗೂರಿನಲ್ಲಿ ಮಾತನಾಡಿದ ಅವರು, ಸಿಎಂಗೆ ಸ್ವಾಭಿಮಾನ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಳೆ ಲೋಕಾಯುಕ್ತ ವಿಚಾರಣೆ ಎದುರಿಸಲಿ. ಲೋಕಾಯುಕ್ತ ಸಿಎಂ ಆಡಳಿತ ವ್ಯಾಪ್ತಿಗೆ ಬರುತ್ತದೆ.
ಅವರ ಕೈ ಕೆಳಗಿನ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಬೇಕು. ಹೀಗಾಗಿ ನ್ಯಾಯಯುತವಾದ ತನಿಖೆ ಆಗುವ ನಂಬಿಕೆಯಿಲ್ಲ. ಆ ಕಾರಣದಿಂದ ಸಿಬಿಐಗೆ ವಿಚಾರಣೆ ನೀಡಲು ಬಿಜೆಪಿ ಒತ್ತಾಯ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಭಯದಿಂದ ತಮ್ಮ ಯಾವುದೇ ಹಗರಣಗಳನ್ನು ಸಿಬಿಐಗೆ ನೀಡುತ್ತಿಲ್ಲ.
ಸಿಬಿಐ ರಾಜ್ಯ ಪ್ರವೇಶಕ್ಕೆ ಬಿಡುತ್ತಿಲ್ಲ ಎಂದರು. ಕೊರೊನಾ ಸಮಯದಲ್ಲಿ ಜನರಿಗೆ ವ್ಯಾಕ್ಸಿನ್ ಬಗ್ಗೆ ತಪ್ಪು ಸಂದೇಶ ಕೊಟ್ಟು ರಾಜಕೀಯ ಮಾಡಿದ್ದು ಕಾಂಗ್ರೆಸ್ ನಾಯಕರು. ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಹೇಳಿದರು.