ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಎರಡು ಪಟ್ಟು ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕಾಲದಲ್ಲಿ ಪ್ರವಾಹ ಆದಾಗ 63 ಹೊಸ ಗ್ರಾಮಗಳನ್ನೆ ಕಟ್ಟಿಸಿದರು. ಎರಡನೇ ಸಾರಿ ಪ್ರವಾಹ ಆದಾಗ ಸುಮಾರು ಮೂರು ಲಕ್ಷ ಮನೆಗಳನ್ನು ಐದು ಲಕ್ಷ ಪರಿಹಾರ ನೀಡಿದ್ದೇವೆ.
ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡಿದ್ದೇವು. ಒಣ ಬೇಸಾಯಕ್ಕೆ 13 ಸಾವಿರ, ನೀರಾವರಿಗೆ 18 ಸಾವಿರ, ತೋಟಗಾರಿಗೆ ಬೆಳೆಗಳಿಗೆ 25 ಸಾವಿರ ರೂ. ಪ್ರತಿ ಎಕರೆಗೆ ಪರಿಹಾರ ನೀಡಿದ್ದೇವು. ಸುಮಾರು ಏಳು ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಎರಡು ಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಆರ್ಥಿಕ ಸಮೀಕ್ಷೆಯಿಂದ ಮಕ್ಕಳು ಮತ್ತು ಶಿಕ್ಷಕರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ಸಮೀಕ್ಷೆ ನಡೆಯುತ್ತಿಲ್ಲ. ಬಹಳಷ್ಟು ಜನ ಮನೆಯಲ್ಲಿ ಇರುವುದಿಲ್ಲ. ಸಹಕಾರ ನೀಡುತ್ತಿಲ್ಲ ಹೀಗಾಗಿ ಈ ಸಮೀಕ್ಷೆಗೆ ಯಾವುದೇ ಮಹತ್ವ ಉಳಿದಿಲ್ಲ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಸರ್ಕಾರ 15 ನೇ ಹಣಕಾಸು ಅಡಿಯಲ್ಲಿ ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಗೆ ನೀಡಿದೆ. 15 ನೇ ಹಣಕಾಸು ಯೋಜನೆಯಲ್ಲಿ 14 ನೇ ಹಣಕಾಸು ಆಯೋಗಕ್ಕಿಂತ ಒಂದು ಲಕ್ಷ ಕೊಟಿ ಹೆಚ್ಚಿಗೆ ಕೊಟ್ಟಿದೆ.
ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಐದು ವರ್ಷದಲ್ಲಿ ಒಟ್ಟು 7 ಸಾವಿರ ಕೋಟಿ ರೂ. ಬಂದಿತ್ತು. ಈಗ ಪ್ರತಿ ವರ್ಷ ಏಳು ಸಾವಿರ ಕೊಟಿ ಬರುತ್ತಿದೆ. 6 ಸಾವಿರ ಕಿ.ಮೀ. ಹೈವೆ ಆಗುತ್ತಿದೆ. ರಾಜ್ಯದಲ್ಲಿ ಕೇಂದ್ರದ ಅನುದಾನದಿಂದಲೇ ಯೋಜನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಹೇಳಿದರು. ಸೌಜನ್ಯ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಅವಳಿಗೆ ನ್ಯಾಯ ಸಿಗಬೇಕು ಅಷ್ಟೆ ಎಂದು ಹೇಳಿದರು.