ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಎಂ. ಯರಗುಪ್ಪಿ ಹಾಗೂ ಹರದಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಪಿ.ವೈ. ಮ್ಯಾಗೇರಿ ಅವರು ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ರಾಜ್ಯ ಘಟಕ, ಹೊಳೆಆಲೂರ ಇವರ ವತಿಯಿಂದ ಕೊಡಮಾಡುವ 2025–26ನೇ ಸಾಲಿನ ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಸವರಾಜ ಯರಗುಪ್ಪಿ ಅನೇಕ ಪುನಶ್ಚೇತನ ತರಬೇತಿಗಳಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಅವರನ್ನು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತಾಲೂಕಿನ ಹರದಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪಿ.ವೈ. ಮ್ಯಾಗೇರಿ ಅವರಿಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಸೆಪ್ಟೆಂಬರ್ 14ರಂದು ಗಜೇಂದ್ರಗಡದ ಶ್ರೀ ಅನ್ನದಾನೇಶ್ವರ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪುರಸ್ಕೃತರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹರ್ಲಾಪುರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ ಸೇರಿದಂತೆ ಪದಾಧಿಕಾರಿಗಳು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.


