ವಿಜಯಸಾಕ್ಷಿ ಸುದ್ದಿ, ನರೇಗಲ್ಲ : 1986ರಿಂದಲೂ ಛಾಯಾಚಿತ್ರ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಂಜುನಾಥ ಫೋಟೋ ಸ್ಟುಡಿಯೋದ ಮಾಲೀಕ, ಪಟ್ಟಣದ ಹಿರಿಯ ಛಾಯಾಗ್ರಾಹಕ ಮಲ್ಲಯ್ಯ ಕಳಕಯ್ಯ ಗುಂಡುಗೋಪರಮಠ ಅವರಿಗೆ ರಾಜ್ಯ ಮಟ್ಟದ `ಛಾಯಾಶ್ರೀ’ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಿಜಿ ಇಮೇಜ್ ದಶಮಾನೋತ್ಸವ-2024ರ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ನಾಗೇಶ ಎಸ್.ಎಚ್ ಗಣ್ಯರ ಸಮ್ಮುಖದಲ್ಲಿ ಮಲ್ಲಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ನರೇಗಲ್ಲ ಪಟ್ಟಣದಲ್ಲಿ ಕಳೆದ 38 ವರ್ಷಗಳಿಂದಲೂ ಉತ್ತಮ ಛಾಯಾಗ್ರಾಹಕರಾಗಿ ಸೇವೆಯೊಂದಿಗೆ, ಅನೇಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರನ್ನು ಗುರುತಿಸಿದ ಗಜೇಂದ್ರಗಡ ತಾಲೂಕು ಛಾಯಾಗ್ರಾಹಕರ ಸಂಘ ಅವರನ್ನು ತಾಲೂಕಾ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷರನ್ನಾಗಿ ನೇಮಿಸಿತು.
ನಂತರ ಗದಗ ಜಿಲ್ಲಾ ಛಾಯಾಗ್ರಾಹಕ ಸಂಘವು ಮಲ್ಲಯ್ಯ ಗುಂಡಗೋಪುರಮಠರಿಗೆ ಛಾಯಾಶ್ರೀ ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಿತ್ತು.
ಅಭಿನಂದನೆ: ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಪವನ್ ಮೆಹರವಾಡೆ, ಗಜೇಂದ್ರಗಡ ತಾಲೂಕಾಧ್ಯಕ್ಷ ಶಿವಾನಂದ ಮೇಟಿ, ನರೇಗಲ್ಲದ ಸ್ಟುಡಿಯೋಗಳ ಮಾಲೀಕರಾದ ಸಮೀರ ಬಳಬಟ್ಟಿ, ಮಲ್ಲಣ್ಣ ಬೆಟಗೇರಿ, ಈಶ್ವರ ಬೆಟಗೇರಿ, ಗವಿಸಿದ್ದಪ್ಪ ಗೊಡಚಪ್ಪನವರ, ಚಂದ್ರಶೇಖರ ಬೆಟಗೇರಿ, ಚಂದ್ರು ಜೋಳದ, ರಫೀಕ್ ನದಾಫ್ ಸೇರಿದಂತೆ ಇನ್ನು ಅನೇಕ ಸ್ನೇಹಿತರು, ಬಂಧು-ಬಳಗದವರು ಗುಂಡಗೋಪುರಮಠರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.