ವಿಜಯಸಾಕ್ಷಿ ಸುದ್ದಿ, ಗದಗ : ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಬೆಟ್ಟದ ಹುಲಿ ಗೆಳೆಯರ ಬಳಗ ಹಾಗೂ ಲಾಲಸಾಬ ಅರಗಂಜಿ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಜಿದ್ದಾ ಜಿದ್ದಿನ ಟಗರಿನ ಕಾಳಗ ಮೂರು ದಿನಗಳವರೆಗೆ ನಡೆಯಿತು.
ಮೊದಲ ದಿನದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅಪ್ಪಯ್ಯ ಶಾಸ್ತಿçಗಳು ಹಿರೇಮಠ ಅವರು ವಹಿಸಿದ್ದರೆ, ಎರಡನೇ ದಿನದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಿರೋಳ ಗವಿಮಠದ ಅಭಿನವ ಯಚ್ಚರಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಾಲಸಾಬ ಅರಗಂಜಿ ಮಾತನಾಡಿ, ಟಗರಿನ ಕಾಳಗ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದ ಗ್ರಾಮೀಣ ಕ್ರೀಡೆ ಇದಾಗಿದ್ದು ರಾಜರ ಕಾಲದಲ್ಲಿ ಸಮ ಬಲದ ರಾಜರು ಯುದ್ಧದ ಕೊನೆಯ ಸಂದರ್ಭದಲ್ಲಿ ಎರಡು ರಾಜ್ಯದ ರಾಜರುಗಳು ತಮ್ಮ ಪ್ರತಿನಿಧಿಯಾಗಿ ಟಗರಿನ ಕಾಳಗವನ್ನು ಏರ್ಪಡಿಸುತ್ತಿದ್ದರು. ಆ ಕಾಳಗದಲ್ಲಿ ಗೆದ್ದ ಟಗರಿನ ರಾಜನು ರಾಜ್ಯವನ್ನು ಗೆದ್ದಂತೆ ಎನ್ನುವ ನಂಬಿಕೆ ಇತ್ತು.
ಟಗರಿನ ಕಾಳಗ ಕೇವಲ ಮನರಂಜನೆ ಕಾರ್ಯಕ್ರಮ ಆಗಿರದೆ ಐತಿಹಾಸಿಕ ಗ್ರಾಮೀಣ ಕ್ರೀಡೆಯೂ ಆಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯುವನಾಯಕಿ ಪ್ರಭಾವತಿ ಚವಡಿ, ದ್ಯಾಮಣ್ಣ ಕಾಡಪ್ಪನವರ, ಪ್ರಕಾಶ ಸೋಬರದ, ಪ್ರಕಾಶಗೌಡ ತಿರಕನಗೌಡ್ರ, ಹನಮಂತಗೌಡ ತಿರಕನಗೌಡ್ರ, ಶರಣಪ್ಪ ಕಾಡಪ್ಪನವರ, ಪರಸಪ್ಪ ರಾಥೋಡ್, ದ್ಯಾಮಣ್ಣ ತೆಗ್ಗಿ, ಅಕ್ಷಯ ಗಡೆಕಾರ, ರಾಜೇಸಾಬ ಚಳ್ಳಮರದ, ಶರಣಪ್ಪ ಸೂಡಿ ಸೇರಿದಂತೆ ಲಾಲಸಾಬ ಅರಗಂಜಿ ಅಭಿಮಾನಿ ಬಳಗದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಹಾಲು ಹಲ್ಲಿನ ಟಗರಿನ ಕಾಳಗದ ಪ್ರಥಮ ಬಹುಮಾನವನ್ನು ಮಣಿಕಂಠ ಶಿರೋಳ, ದ್ವಿತೀಯ ಬಹುಮಾನವನ್ನು ಶ್ರೀರಂಗ ಅಲಿಯಾಸ್ ಡಾಲಿ ತೃತೀಯ ಬಹುಮಾನವನ್ನು ಆರ್ ಜ್ಯೂನಿಯರ್ ಮರಳಿ ಬಂದ ಮಣಿಕಂಠ ಶಾಂತಗೇರಿ ಪಡೆದುಕೊಂಡಿತು. ಎರಡು ಹಲ್ಲಿನ ಟಗರಿನ ಕಾಳಗದ ಪ್ರಥಮ ಬಹುಮಾನವನ್ನು KGF ಸುಲ್ತಾನ್ ನರಗುಂದ, ದ್ವಿತೀಯ ಬಹುಮಾನವನ್ನು AS ಸರ್ಕಾರ್ ನರಗುಂದ, ತೃತೀಯ ಬಹುಮಾನವನ್ನು ಶ್ರೀ ಮಾರುತೇಶ್ವರ ಎಕ್ಸ್ಪ್ರೆಸ್ ಕಿತ್ತಲಿ ಪಡೆದುಕೊಂಡಿತು. ನಾಲ್ಕು ಹಲ್ಲಿನ ಟಗರಿನ ಕಾಳಗದ ಪ್ರಥಮ ಬಹುಮಾನವನ್ನು ದುರ್ಗಾದೇವಿ ಪ್ರಸನ್ನ ಹುಲಿಗೆಪ್ಪ, ದ್ವಿತೀಯ ಬಹುಮಾನವನ್ನು ಶ್ರೀ ರೇಣುಕಾದೇವಿ ಅಣ್ಣಿಗೇರಿ, ತೃತೀಯ ಬಹುಮಾನವನ್ನು ಶ್ರೀ ಲಕ್ಷ್ಮೀದೇವಿ ಶಿರೋಳ ಪಡೆದುಕೊಂಡಿತು.
ಬಹುಮಾನಗಳನ್ನು ವಿತರಿಸಿದ ಎಲ್ಲ ಗಣ್ಯರಿಗೆ ಹಾಗೂ ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸಿದ ಎಲ್ಲ ಗ್ರಾಮಸ್ಥರಿಗೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಸರ್ವರಿಗೂ ಬೆಟ್ಟದ ಹುಲಿ ಗೆಳೆಯರ ಬಳಗ ಹಾಗೂ ಲಾಲಸಾಬ ಅರಗಂಜಿ ಅಭಿಮಾನಿ ಬಳಗದವರು ಧನ್ಯವಾದಗಳನ್ನು ತಿಳಿಸಿದರು.
ಆರು ಹಲ್ಲಿನ ಟಗರಿನ ಕಾಳಗದ ಪ್ರಥಮ ಬಹುಮಾನವನ್ನು ರಾಯಣ್ಣ ಎಕ್ಸ್ಪ್ರೆಸ್ ಹೊನ್ನಳ್ಳಿ, ದ್ವಿತೀಯ ಬಹುಮಾನವನ್ನು ಅಣ್ಣಿಗೇರಿ ದೊರೆ, ತೃತೀಯ ಬಹುಮಾನವನ್ನು ಮರಡಿ ಮಾರುತೇಶ್ವರ ಪ್ರಸನ್ನ ಇಂಡಿಯನ್ ಆರ್ಮಿ ಪಡೆದುಕೊಂಡಿತು. ರಾಜ್ಯ ಮಟ್ಟದ ಟಗರಿನ ಕಾಳಗದ ಕೇಂದ್ರ ಬಿಂದುವಾಗಿದ್ದ ಎಚ್‌ಎಫ್ 100 ಬೈಕ್, ಫ್ರಿಡ್ಜ್, ಕೂಲರ್, ಆಕರ್ಷಕ ಟ್ರೋಫಿಯನ್ನು ಎಂಟು ಹಲ್ಲಿನ ಟಗರಿನ ಕಾಳಗ ಸ್ಪರ್ಧೆಯಲ್ಲಿ ಇರಿಸಲಾಗಿದ್ದು, ಪ್ರಥಮ ಬಹುಮಾನವನ್ನು 7 ಸ್ಟಾರ್ ಸುತುಗುಂಡಾರ್ ಸುಲ್ತಾನ್, ದ್ವಿತೀಯ ಬಹುಮಾನವನ್ನು ಪಂದಳದ ಕಂದ ಹಂಚಿನಾಳ, ತೃತೀಯ ಬಹುಮಾನವನ್ನು RTJ ಗ್ರೂಪ್ ಕೊಡೇಕಲ್, ಚತುರ್ಥ ಬಹುಮಾನವನ್ನು ಇಂಡಿಯನ್ ಆರ್ಮಿ ಮಣಿಕಂಠ ಶಿರೋಳ ಪಡೆದುಕೊಂಡಿತು.