ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಾ ಕುರುಬರ ಸಂಘದ ವತಿಯಿಂದ ಜೂನ್ ತಿಂಗಳ ಮೊದಲನೇ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿಗಳು ನೀಡುವ ದಿನಾಂಕವನ್ನಾಧರಿಸಿ ಗದಗ ತಾಲೂಕಾ ಕುರುಬರ ಸಂಘದ ರಜತ ಮಹೋತ್ಸವ ಹಾಗೂ ರಾಜ್ಯಮಟ್ಟದ ಕನಕೋತ್ಸವ ಸಮಾರಂಭವನ್ನು ಆಯೋಜಿಸಲಾಗುತ್ತಿದೆ ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರು ಹೇಳಿದರು.
ನಗರದ ಪತ್ರಿಕಾ ಭವಾನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಸಂಘದ ರಜತ ಮಹೋತ್ಸವದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯ ಮಟ್ಟದ ಕನಕೋತ್ಸವ ಹಾಗೂ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಗ್ರಂಥ ಸಮರ್ಪಣಾ ಸಮಾರಂಭ ನಡೆಯಲಿದೆ. ಕುಲಗುರು, ದಾಸವರೇಣ್ಯ, ಭಕ್ತ ಕನಕದಾಸರ ಆಶೀರ್ವಾದದಿಂದ ಗದಗ ತಾಲೂಕಾ ಸಂಘವು ಅನೇಕ ಜನಪರ ಹಾಗೂ ಸಮಾಜಪರ ಕಾರ್ಯಗಳ ಮೂಲಕ ಸಮಾಜ ಬಾಂಧವರಿಗೆ ಸ್ಪಂದಿಸಿದೆ ಎಂದು ಹೇಳಿದರು.
ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮ ಅಭೂತಪೂರ್ವ ಯಶಸ್ಸಿನಲ್ಲಿ ಸಮುದಾಯದ ಪ್ರತಿಯೊಬ್ಬರ ಸಹಭಾಗಿತ್ವ ಹಾಗೂ ಸಹಕಾರ ಮುಖ್ಯವಾಗಿದೆ. ಹೀಗಾಗಿ ರಜತ ಮಹೋತ್ಸವದ ಸಂದರ್ಭದ ಸವಿನೆನಪಿನಗಾಗಿ ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ. ಸ್ಮರಣ ಸಂಚಿಕೆಯಲ್ಲಿ ಸಂಘ ನಡೆದು ಬಂದ ಇತಿಹಾಸ, ಸಮಾಜದ ಧಾರ್ಮಿಕ ಪುರುಷರ ಲೇಖನಗಳನ್ನೊಳಗೊಂಡು ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ ಎಂದರು.
ರಜತ ಮಹೋತ್ಸವ ಸ್ವಾಗತ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಮಾಜಿ ಸಚಿವ ಬಿ.ಆರ್. ಯಾವಗಲ್ ಮತ್ತು ಮಾಜಿ ಶಾಸಕ ಡಿ.ಆರ್. ಪಾಟೀಲರನ್ನು ನೇಮಿಸಲಾಗಿದೆ. ಅಧ್ಯಕ್ಷರಾಗಿ ರೋಣ ಮತಕ್ಷೇತ್ರದ ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಪಾಟೀಲ, ಕಾರ್ಯಾಧ್ಯಕ್ಷರನ್ನಾಗಿ ಸ್ಥಳೀಯ ನಗರಸಭೆ ಪ್ರಥಮಪ್ರಜೆ ಹಾಗೂ ಸಮಿತಿಯ ಸದಸ್ಯರನ್ನಾಗಿ ಮಾಜಿ ಶಾಸಕ ಜಿ.ಎಸ್ ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ರಾಜ್ಯ ಸಂಘದ ನಿರ್ದೇಶಕರುಗಳಾದ ಚೆನ್ನಮ್ಮ ಹುಳಕಣ್ಣವರ, ಕಳಕನಗೌಡ ಗೌಡರ, ಪ್ರಹ್ಲಾದ ಹೊಸಳ್ಳಿ, ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ ಗುಗ್ಗರಿ, ನೀಲಪ್ಪ ಗುಡದಣ್ಣವರ, ಬಸವರಾಜ ಜಗ್ಗಲ, ಮಂಜುನಾಥ ಮುಂಡವಾಡ, ಶರಣಪ್ಪ ದೊಣ್ಣೆಗುಡ್ಡ, ಶೇಖಣ್ಣ ಕಾಳೆ, ಹೊನ್ನೇಶ ಪೋಟಿ ಇವರುಗಳನ್ನು ನೇಮಿಸಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಂದಾನೆಪ್ಪ ವಿಭೂತಿ, ಡಾ. ಎಸ್.ಬಿ ಗೋವಿಂದಪ್ಪ, ರಾಮಚಂದ್ರ, ಮಾರುತಿ ಮಡ್ಡಿ, ಎಸ್.ಎಸ್. ಕರಡಿ, ಚಂದ್ರಣ್ಣ ಹುಬ್ಬಳ್ಳಿ, ಸಂಗು ಗೌಡರ, ಮಂಜುನಾಥ ಕುರಿ ಸೇರಿದಂತೆ ಇತರರಿದ್ದರು.
ಸುಂದರ ವಿನ್ಯಾಸ ಹಾಗೂ ಮುದ್ರಣದ ಮೂಲಕ ಸಂಘದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳನ್ನು ತಿಳಿಸುವ ಆಶಯ ಸ್ಮರಣ ಸಂಚಿಕೆಯದ್ದಾಗಿದೆ. ಸಮಾರಂಭವನ್ನು 2 ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಕನಕದಾಸರ ಕುರಿತು ವಿಚಾರ ಗೋಷ್ಠಿಗಳು, ಸಮಾಜದ ನೌಕರ ಬಾಂಧವರ ಸಮಾವೇಶ, ಮಹಿಳಾ ಗೋಷ್ಠಿ, ಕನಕದಾಸರ ಕೀರ್ತನೆ, ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಈ ಹಿನ್ನೆಲೆಯಲ್ಲಿ ಕನಕಭವನದಲ್ಲಿ ನಡೆದ ಜಿಲ್ಲಾ ಸಮಾಜ ಬಾಂಧವರ ಸಭೆಯಲ್ಲಿ ಕಾರ್ಯಕ್ರಮಗಳ ರೂಪುರೇಷೆ ಕುರಿತು ಚರ್ಚಿಸಿ ವಿವಿಧ ಸಮಿತಿಗಳನ್ನು ರಚಿಸಿಲಾಗಿದೆ ಎಂದು ಫಕೀರಪ್ಪ ಹೆಬಸೂರು ಹೇಳಿದರು.