ವಿಜಯಸಾಕ್ಷಿ ಸುದ್ದಿ, ಗದಗ : ಪ್ರಚಲಿತ ಕಾಲದ ಸಂಶೋಧಕರು ಒಂದೊಂದು ಕ್ಷೇತ್ರಕ್ಕೆ ಸೀಮಿತವಾಗಿದ್ದು, ಕಲಬುರ್ಗಿಯವರು ಯೋಜನೆ, ಬೋಧನೆ, ಸಂಶೋಧನೆ ಮುಂತಾದ ಐದು ತತ್ವಗಳ ಹಿನ್ನೆಲೆಯ ಬಹುಶಿಸ್ತಿನ ಅಧ್ಯಯನಕಾರರಾಗಿದ್ದರು ಎಂದು ಹಿರಿಯ ವಿದ್ವಾಂಸ ಡಾ. ವೀರಣ್ಣ ರಾಜೂರು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರದ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಕೆ.ಎಲ್.ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ಡಾ. ಎಂ.ಎಂ. ಕಲಬುರ್ಗಿಯವರ ಸೃಜನ ಸಾಹಿತ್ಯ’ ಎಂಬ ವಿಷಯದ ಕುರಿತಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರಂತರ ಓದು ಮತ್ತು ಅದಮ್ಯ ಉತ್ಸಾಹ ಇವೆರಡೂ ಕಲಬುರ್ಗಿಯವರ ಚಹರೆಗಳಾಗಿದ್ದವು. ಓದಲು ಮತ್ತು ಬರೆಯಲೆಂದೇ ಹುಟ್ಟಿದ ಮನುಷ್ಯನೇನೋ ಎಂಬಷ್ಟು ಹಟದಲ್ಲಿ ಇವರು ಬರೆದ ಪುಸ್ತಕಗಳ ಸಂಖ್ಯೆ 115.
ಸುಮಾರು 700ಕ್ಕೂ ಹೆಚ್ಚು ಬಿಡಿಬರಹಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಗ್ರಂಥ ಸಂಪಾದನೆಯನ್ನು ಒಂದು ಅಧ್ಯಯನ ಶಿಸ್ತಾಗಿ ಅಭಿವೃದ್ಧಿಪಡಿಸುವಲ್ಲಿ ಕಲಬುರ್ಗಿ ವಹಿಸಿದ ಶ್ರಮ ಮತ್ತು ಎಚ್ಚರ ಇವೆರಡೂ ಚರಿತ್ರಾರ್ಹ.
ಕಲಬುರ್ಗಿ ಅವರ ಶೋಧಗಳು ಕನ್ನಡ ಸಾಹಿತ್ಯಕಷ್ಟೇ ಅಲ್ಲ, ಕನ್ನಡ ನಾಡು-ನುಡಿಯ ಸಂಸ್ಕೃತಿಯ ಶೋಧಗಳಿಗೂ ಮಾದರಿಯಾಗಿವೆ. ಕಲಬುರ್ಗಿ ಅಧ್ಯಯನಶೀಲರಷ್ಟೇ ಅಲ್ಲ, ಅವರೊಬ್ಬ ಸಮರ್ಥ ಸಂಘಟಕರೂ ಆಗಿದ್ದರೆಂಬುದಕ್ಕೆ ಅವರು ಕಟ್ಟಿ ಬೆಳೆಸಿದ ಸಾಹಿತ್ತಿಕ, ಸಾಂಸ್ಕೃತಿಕ ಸಂಘಟನೆಗಳೇ ಸಾಕ್ಷಿಯಾಗಿವೆ ಎಂದರು.
ಪ್ರೊ. ಪಿ.ಜಿ. ಪಾಟೀಲ ಸ್ವಾಗತಿಸಿದರು. ಪ್ರೊ. ಚಂದ್ರಶೇಖರ ವಸ್ತçದ ಆಶಯ ನುಡಿಗಳನ್ನಾಡಿದರು. ಡಾ. ರಮೇಶ ಕಲ್ಲನಗೌಡರ ಅವರು ಕಲಬುರ್ಗಿಯವರ `ಕೆಟ್ಟಿತ್ತು ಕಲ್ಯಾಣ’ ನಾಟಕದ ಕುರಿತಾಗಿ ಮತ್ತು ಡಾ. ವೈ.ಎಂ. ಭಜಂತ್ರಿಯವರು `ನೀರು ನೀರಡಿಸಿತ್ತು’ ಕಾವ್ಯದ ಬಗ್ಗೆ ಉಪನ್ಯಾಸ ನೀಡಿದರು. ಡಾ. ಎ.ಕೆ. ಮಠ ವಂದಿಸಿದರು.
ಡಾ. ರಾಮಚಂದ್ರ ಪಡೆಸೂರು ಮತ್ತು ಪ್ರೊ. ಶೃತಿ ಮ್ಯಾಗೇರಿ ನಿರೂಪಿಸಿದರು. ಪ್ರೊ. ವಿಶ್ವನಾಥ ಜಿ., ಡಾ. ಅಂದಯ್ಯ ಅರವಟಗಿಮಠ, ಪ್ರೊ. ಶಿದ್ದಲಿಂಗ ಸಜ್ಜನಶೆಟ್ಟರ್, ಶಿವನಗೌಡ ಗೌಡರ, ಪ್ರಕಾಶ ಅಸುಂಡಿ, ಜಿ.ಬಿ. ಪಾಟೀಲ ಡಾ. ರಾಜೇಂದ್ರ ಗಡಾದ, ಹನುಮಾಕ್ಷಿ ಗೋಗಿ, ಲಿಂಗರಾಜ ಪಾಟೀಲ ಒಳಗೊಂಡAತೆ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಲಬುರ್ಗಿಯವರ ಸೃಜನಶೀಲ ಶಕ್ತಿ ಅಗಾಧವಾದದುದು. ಉತ್ತಮ ಸೃಜನಶೀಲ ವ್ಯಕ್ತಿ ಅತ್ಯುತ್ತಮ ಸಂಶೋಧಕನೂ ಅಗಬಲ್ಲ ಎನ್ನುವುದಕ್ಕೆ ಕಲಬುಗಿಯವರ ಬದುಕು ಮಾದರಿ. ಅತ್ಯುತ್ತಮ ಸಂಶೋಧಕನಾದವನು ಸೂರ್ಯ-ಚಂದ್ರರ ಹಾಗೆ ಜಗತ್ತಿಗೆ ಸದಾ ಬೆಳಕನ್ನು ಚೆಲ್ಲುವನು. ಪಾದರಸದಂತಹ ವ್ಯಕ್ತಿತ್ವದ ಅವರು ಉತ್ತಮ ಅಧ್ಯಾಪಕ ಮತ್ತು ಸಂಶೋಧಕ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದರು ಎಂದು ಡಾ. ವೀರಣ್ಣ ರಾಜೂರು ವಿವರಿಸಿದರು.