ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯಕ್ಕೂ ಮುನ್ನವೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಠಗಳು ಮಾಡಿವೆ. ಶಿಕ್ಷಣಕ್ಕೆ ಯಾವುದೇ ಮಿತಿಯಿಲ್ಲ. ಎಲ್ಲರನ್ನೂ ಬೆಳೆಸುವುದೇ ಮುಖ್ಯ ಉದ್ದೇಶ ಎನ್ನುವುದನ್ನು ಮಠಗಳಿಂದ ಸಾಬೀತಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಸರ್ಕಾರಗಳು ಮಾಡಲಾಗದಂತಹ ಕಾರ್ಯವನ್ನು ರಾಜ್ಯದ ಮಠಗಳು ಮಾಡುತ್ತಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ನಗರದ ಆನಂದಾಶ್ರಮದ ಆವರಣದಲ್ಲಿ ಆಯೋಜಿಸಿದ್ದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ತಡೆಗಟ್ಟಲು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ. ಮಕ್ಕಳು ದೇಶದ ಭವಿಷ್ಯ ರೂಪಿಸಬೇಕಾದರೆ, ಶಾಲೆಯ ಗಂಟೆ ಬಾರಿಸಬೇಕು. ಕೇವಲ ಅನ್ನದಾಸೋಹ ಮಾತ್ರವಲ್ಲದೆ, ಶಿಕ್ಷಣ ದಾಸೋಹವನ್ನೂ ನೀಡುತ್ತಿರುವ ಮಠಗಳ ಕಾರ್ಯವನ್ನು ನಾನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲು ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ರಾಜ್ಯದಲ್ಲಿ ಶಿಕ್ಷಣ ನೀತಿಯ ಬಗ್ಗೆ ಇರುವ ಗೊಂದಲಗಳ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರ ಮತ್ತು ರಾಜ್ಯದ ಶಿಕ್ಷಣ ನೀತಿಯಲ್ಲಿ ಚರ್ಚೆಯಲ್ಲಿರುವ ದ್ವಿಭಾಷಾ ಸೂತ್ರ ಕುರಿತು ಪ್ರಸ್ತಾಪಿಸಿ, “ನಾನು ಮೋದಿ ಪರವಾಗಲಿ, ಸಿದ್ದರಾಮಯ್ಯ ವಿರೋಧಿಯಾಗಲಿ ಅಲ್ಲ. ಬಡವರ ಮಕ್ಕಳ ಪರವಾಗಿದ್ದೇನೆ. ದೇಶದ ಇತರ ರಾಜ್ಯಗಳು ಮತ್ತು ವಿದೇಶಗಳೊಂದಿಗೆ ಸ್ಪರ್ಧಿಸಲು ಸಹಾಯ ಮಾಡುವ ಶಿಕ್ಷಣ ಬೇಕು. ಅದಕ್ಕಾಗಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಣ್ಣಿ” ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯವನ್ನು ಉದ್ಘಾಟಿಸಿದರು. ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಸಿದ್ಧಲಿಂಗ ಶ್ರೀಗಳು ಆನಂದಾಶ್ರಮದ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು. ರೋಣ ಶಾಸಕ, ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮರೇಗೌಡ ಬಯ್ಯಾಪೂರ ಸೇರಿದಂತೆ ಹಲವು ಗಣ್ಯರು ಹಾಗೂ 30ಕ್ಕೂ ಹೆಚ್ಚು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನರೇಗಲ್ಲ ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎ.ಪಿ. ಪಾಟೀಲ ಗುರೂಜಿ, ಉಮೇಶಗೌಡ ಪಾಟೀಲ, ರವೀಂದ್ರನಾಥ ದೊಡ್ಡಮೇಟಿ, ಎ.ಎನ್. ಹುಡೇದ ಮುಂತಾದವರು ಉಪಸ್ಥಿತರಿದ್ದರು.
“ಬಸವ ತತ್ವದ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಶೂದ್ರರು ಮತ್ತು ಬಡವರನ್ನು ಉದ್ಧರಿಸಿದ ಕೀರ್ತಿ ಮಠಾಧೀಶರಿಗೆ ಸಲ್ಲುತ್ತದೆ. ವೀರಶೈವ-ಲಿಂಗಾಯತ ಮಠಾಧೀಶರು ಸಮಾಜದಲ್ಲಿನ ಮೇಲು-ಕೀಳು ಭಾವನೆಯನ್ನು ದೂರ ಮಾಡಿದ್ದಾರೆ. ಇದನ್ನು ಕೇವಲ ಕಾನೂನಿನ ಮೂಲಕ ಮಾಡಲು ಸಾಧ್ಯವಿಲ್ಲ, ಸರ್ಕಾರ ಕಾನೂನು ಮಾಡಬಹುದಷ್ಟೇ. ಆದರೆ ಸಮಾಜ ಸುಧಾರಣೆಗೆ ಶ್ರೀಮಠಗಳ ಕೊಡುಗೆ ಅಪಾರ.”
— ಗೋವಿಂದ ಕಾರಜೋಳ,
ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ.