ದುಷ್ಟರ ಸಂಗದಿಂದ ದೂರವಿರಿ

0
???????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮ ಜೀವನವು ಹಸನಾಗಬೇಕೆಂದರೆ ನಾವು ದುಷ್ಟರ ಸಂಗದಿಂದ ದೂರವಿರಬೇಕು. ಒಮ್ಮೆ ದುಷ್ಟರ ಸಂಗಕ್ಕೆ ಬಿದ್ದರೆ ನಮ್ಮ ಆಲೋಚನೆಗಳು, ನಡೆ-ನುಡಿಗಳೆಲ್ಲವೂ ದುಷ್ಟತನದಿಂದ ಕೂಡಿರುತ್ತವೆ. ಆದ್ದರಿಂದ ಸಹವಾಸ ಮಾಡುವಾಗ ಯೋಚಿಸಿ ಇನ್ನೊಬ್ಬರ ಸಹವಾಸ ಮಾಡಬೇಕೆಂದು ಉಪನ್ಯಾಸಕ ಎಸ್.ಎಸ್. ಹಿರೇಮಠ ಹೇಳಿದರು.

Advertisement

ಪಟ್ಟಣದ ಕೋಡಿಕೊಪ್ಪದಲ್ಲಿನ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ಎಸ್‌ಎವಿವಿಪಿ ಸಮಿತಿ ನರೇಗಲ್ಲ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ 59ನೇ ಶಿವಾನುಭವಗೋಷ್ಠಿಯಲ್ಲಿ ಶರಣರ ವಚನಗಳಲ್ಲಿ ಜನಜೀವನ ಕುರಿತು ಮಾತನಾಡಿದರು.

ಇಂತಹ ಸತ್ಸಂಗ ಮತ್ತು ಪುರಾಣ ಪ್ರವಚನಗಳಿಂದ ನಾವು ಜ್ಞಾನವನ್ನು ಪಡೆಯಬೇಕು. ಅನುಭಾವಿಗಳ ನುಡಿ, ಸಾಧು ಸಜ್ಜನರ ಸಂಗಗಳು ನಮಗೆ ಸರಿಯಾದ ಜೀವನ ನಡೆಸಲು ದಾರಿದೀಪಗಳಾಗಿವೆ. ಬದುಕು ಒಂದು ಮಕರಂದವಾಗಬೇಕು. ಹೀಗೆ ಮಕರಂದವಾಗಲು ಅದಕ್ಕೆ ಶರಣರ ವಚನಗಳ ಆಧಾರವಿರಬೇಕೆಂದು ಹಿರೇಮಠ ಹೇಳಿದರು.

ನಮ್ಮೆಲ್ಲರ ಬದುಕು ಭಗವಂತ ನೀಡಿದ ಒಂದು ದೊಡ್ಡ ಕೊಡುಗೆ. ಈ ಜೀವನ ಇತರರ ಉಪಕಾರಕ್ಕಾಗಿ ಮೀಸಲಿರಬೇಕು. ನಾನು, ನನ್ನದು ಎನ್ನುವ ಬದಲಾಗಿ ನಾವು, ನಮ್ಮವರು ಎನ್ನಬೇಕು. ನಮ್ಮ ಜೀವನ ಎಂದಿಗೂ ಅಸ್ಥಿರ. ನಾವು ಗಳಿಸಿದ ಆಸ್ತಿ, ಸಂಪತ್ತು ನಮ್ಮ ಹಿಂದೆ ಬರುವುದಿಲ್ಲ, ಬದಲಾಗಿ ನಾವು ಗಳಿಸಿದ ಧರ್ಮಕಾರ್ಯ, ಕೀರ್ತಿ ನಮ್ಮೊಂದಿಗೆ ಬರುತ್ತದೆ. ನಮ್ಮ ಬದುಕು ಹಸನಾಗಲು ಗುರುವಿನ ಅನುಗ್ರಹ ಕಾರಣವಾಗುತ್ತದೆ. ಇದರಿಂದ ನಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ. ಅದಕ್ಕೆ ವಚನಗಳ ಹಿನ್ನೆಲೆಯೂ ದೊರೆತೆರ ನಮ್ಮ ಬದುಕು ಯಶಸ್ವಿಯಾಗುತ್ತದೆ. 12ನೇ ಶತಮಾನದ ಶರಣರು ನಮ್ಮ ನಿತ್ಯದ ಜೀವನಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ವಚನಗಳಲ್ಲಿ ಬರೆದಿಟ್ಟಿದ್ದಾರೆ. ಆದ್ದರಿಂದ ವಚನಗಳ ಪಠಣೆಯನ್ನು ನಿಮ್ಮ ಜೀವನದ ಉಸಿರನ್ನಾಗಿಸಿಕೊಳ್ಳಿ ಎಂದು ಹಿರೇಮಠ ಹೇಳಿದರು.

ಆಡಳಿತಾಧಿಕಾರಿ ಎನ್.ಆರ್. ಗೌಡರ, ಎಂ.ಎ. ಹಿರೆವಡೆಯರ, ಡಾ. ಆರ್.ಕೆ. ಗಚ್ಚಿನಮಠ, ಎಂ.ಎಸ್. ದಢೇಸೂರಮಠ, ಸಂಗಯ್ಯ ಪ್ರಭುಸ್ವಾಮಿಮಠ ಇತರರಿದ್ದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಎಚ್.ಎಂ. ಹಾದಿಮನಿ ವಂದಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಜೀವನದ ಅನುಭವಗಳನ್ನು ವ್ಯಕ್ತಪಡಿಸುವುದೇ ಶಿವಾನುಭವವಾಗಿದೆ. ನಾವು ಆಕಾರದಿಂದ ಮನುಷ್ಯರಾಗಿದ್ದೇವೆ ಆದರೆ ಆಚಾರದಿಂದಲ್ಲ. ನಮ್ಮ ಜೀವನದಲ್ಲಿ ಆಚಾರಗಳ ಅಳವಡಿಕೆಯಾಗಬೇಕಾದರೆ ಇಂತಹ ಶಿವಾನುಭವಗಳ ಅವಶ್ಯಕತೆ ಇದ್ದೇ ಇದೆ. ಶರಣರ ವಚನಗಳಲ್ಲಿ ಇರುವ ಜನಜೀವನವನ್ನು ನಾವು ಅಧ್ಯಯನ ಮಾಡಬೇಕು. 12ನೇ ಶತಮಾನದ ವಚನಕಾರರು ಕನ್ನಡ ಸಾಹಿತ್ಯಕ್ಕೆ ದೊಡ್ಡದಾದ ಕೊಡುಗೆಯನ್ನೇ ನೀಡಿದ್ದಾರೆ. ಆದ್ದರಿಂದ ವಚನ ಸಾಹಿತ್ಯದ ಅಧ್ಯಯನ ನಿಮ್ಮ ಜೀವನದಲ್ಲಿ ಅಳವಡಿಕೆಯಾಗಬೇಕೆಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here