ನಟ ಪ್ರಥಮ್ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ದರ್ಶನ್ ಅಭಿಮಾನಿಗಳು ಹಾಗೂ ಪ್ರಥಮ್ ನಡುವಿನ ವಾಕ್ ಸಮರ ಇದೀಗ ಕಾನೂನು ಮೆಟ್ಟಿಲು ಹತ್ತಿದ್ದು ಪ್ರಥಮ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ತಮ್ಮ ಮೇಲೆ ದರ್ಶನ್ ಫ್ಯಾನ್ಸ್ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂದು ಪ್ರಥಮ್ ಆರೋಪಿಸಿದ್ದಾರೆ. ಮೊದಲಿನಿಂದಲೂ ಪ್ರಥಮ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದ್ದು ಇದಕ್ಕೆಲ್ಲ ಸ್ವತಃ ದರ್ಶನ್ ಕಾರಣ ಎಂದು ಪ್ರಥಮ್ ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ನನ್ನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿಸುತ್ತಿರುವುದು ದರ್ಶನ್ ಸರ್. ಅದು ತಪ್ಪು. ನನ್ನ ಬಗ್ಗೆ ನೆಗೆಟಿವ್ ಆಗಿ ಪ್ರಚಾರ ಮಾಡುವಂತಿಲ್ಲ ಎಂದು ನಾನು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ. ಅದಕ್ಕೂ ಇವರು ಮರ್ಯಾದೆ ಕೊಡುತ್ತಿಲ್ಲ. ಇವರು ಕಾನೂನು ಉಲ್ಲಂಘನೆ ಮಾಡಿದಂತೆ ಆಗಿದೆ’ ಎಂದು ನಟ ಪ್ರಥಮ್ ಆರೋಪಿಸಿದ್ದಾರೆ.
‘ನನಗೆ ಚುಚ್ಚೋಕೆ ಬಂದಿದ್ದರಿಂದಲೇ ನಾನು ಇಷ್ಟು ಅಗ್ರೆಸಿವ್ ಆಗಿ ಮಾತನಾಡುತ್ತಿದ್ದೇನೆ. ನಿಮ್ಮ ಸೆಲ್ನಲ್ಲಿ ಇದ್ದವನೇ ಚುಚ್ಚೋಕೆ ಬಂದಿದ್ದು. ಅದನ್ನು ತಲೆಯಲ್ಲಿ ಇಟ್ಟುಕೊಳ್ಳಿ. ಯಾವ ಸ್ಟಾರ್ಗೆ ನಾನು ಯಾಕೆ ಹೆದರಿಕೊಳ್ಳಬೇಕು? ನೀವು ಇಲ್ಲಿ ಬಂದು ಹೇಳಿಕೆ ನೀಡಬೇಕು. ನಾನು ಸಿನಿಮಾ ಬಿಟ್ಟು ಊರಿಗೆ ಹೋಗುತ್ತಿದ್ದೇನೆ. ಚಿತ್ರರಂಗದಲ್ಲಿ ಬೇರೆಯವರಿಗಾದರೂ ಉಪಯೋಗ ಆಗಲಿ. ಈ ದೌರ್ಜನ್ಯಗಳು ನಿಲ್ಲಲಿ’ ಎಂದು ಪ್ರಥಮ್ ಹೇಳಿದ್ದಾರೆ.
‘ಟ್ರೋಲ್ ಮಾಡುವ ಎಲ್ಲ ಪೇಜ್ಗಳು ಡಿಲೀಟ್ ಆಗಬೇಕಾಗಿದ್ದು ಅದು ತುಂಬಾ ಮುಖ್ಯ. ಎಲ್ಲವನ್ನು ನೋಡಿ ನೀವು ಮಜಾ ತೆಗೆದುಕೊಳ್ಳುತ್ತಾ ಇದ್ದೀರಿ. ನಿಮ್ಮ ಪುಡಾಂಗ್ಗಳಿಗೆ, ತಗಡುಗಳಿಗೆ ಬಿಸಿ ಮುಟ್ಟಿಸಬೇಕು. ಯಾವ ಹೀರೋಗಳ ಸಹವಾಸಕ್ಕೆ ಹೋಗಬೇಡಿ ಅಂತ ನೀವು ವಿಡಿಯೋ ಮಾಡಿ ಹೇಳಬೇಕು. ಅಶ್ವಿನಿ ಪುನೀತ್ ರಾಜ್ಕುಮಾರ್, ಸುದೀಪ್, ಗಣೇಶ್, ಯಶ್, ಶಿವಣ್ಣ, ಧ್ರುವ, ಧನಂಜಯ, ರಮ್ಯಾ ಮುಂತಾದ ಕಲಾವಿದರ ವಿಚಾರಕ್ಕೆ ಹೋಗಬಾರದು ಅಂತ ನೀವು ಅಭಿಮಾನಿಗಳಿಗೆ ಹೇಳಿ’ ಎಂದು ದರ್ಶನ್ ಗೆ ಹೇಳಿದ್ದಾರೆ.
‘ರಮ್ಯಾ ಅವರು ಸಿನಿಮಾ ಮಾಡೋದು ನಿಲ್ಲಿಸಿ ಹಲವು ವರ್ಷ ಆಗಿದೆ. ಇಂದಿಗೂ ಅವರನ್ನು ಸ್ಯಾಂಡಲ್ವುಡ್ ಕ್ವೀನ್ ಅಂತಾರೆ. ಅವರು ಹಾಕಿದ ಚಪ್ಪಲಿಯನ್ನು ಹರಾಜಿಗೆ ಹಾಕಿದರೂ 2ರಿಂದ 5 ಲಕ್ಷ ರೂಪಾಯಿ ಆಗುತ್ತದೆ. ಅದು ರಮ್ಯಾ ಅವರ ಕ್ರೇಜ್. ನಿಮ್ಮ ಪಾಡಿಗೆ ನೀವು ಇರಿ. ಮಾಫಿಯಾ ನಡೆಸಬೇಡಿ’ ಎಂದು ಪ್ರಥಮ್ ನಟ ದರ್ಶನ್ ಗೆ ಹೇಳಿದ್ದಾರೆ.