ವಿಜಯಸಾಕ್ಷಿ ಸುದ್ದಿ, ಡಂಬಳ: ದುಶ್ಚಟಗಳಿಂದ ದೂರ ಇದ್ದಲ್ಲಿ ಸಮಾಜದಲ್ಲಿ ಗೌರವ, ಘನತೆ ಸಿಗುತ್ತದೆ ಹಾಗೂ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಗೋಣಿಬಸಪ್ಪ ಕೊರ್ಲಳ್ಳಿ ಹೇಳಿದರು.
ಡಂಬಳ ವಲಯದಿಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮುಂಡರಗಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವಜೀವನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತೋಂಟಾದರ್ಯ ಮಠದ ಕಾರ್ಯದರ್ಶಿ ಜಿ.ವ್ಹಿ. ಹಿರೇಮಠ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ದುಶ್ಚಟಗಳ ವಿರುದ್ಧ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಗದಗ ಜಿಲ್ಲಾ ಜನಜಾಗೃತಿ ವೇದಿಕೆ ಕೋಶಾಧಿಕಾರಿ ಎ.ಕೆ. ಮುಲ್ಲಾನವರು ಮಾತನಾಡಿ, ದುಶ್ಚಟಗಳನ್ನು ತ್ಯಜಿಸಿದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿಶಾಲಾ ಮಲ್ಲಾಪುರ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭೀಮಪ್ಪ ಗದಗಿನ, ಮಂಜುನಾಥ್ ಸಂಜೀವಣ್ಣವರ, ಹುಲಗಪ್ಪ ಜೋಂಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಂಬಳ ಭಾಗದ ಮೇಲ್ವಿಚಾರಕ ಅಣ್ಣಪ್ಪ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಇದ್ದರು.



