ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೂರಿಯಾ ಗೊಬ್ಬರಕ್ಕಾಗಿ ಪಟ್ಟಣದಲ್ಲಿ ಗುರುವಾರವೂ ಕೃಷಿ ಪರಿಕರ ಅಂಗಡಿ ಮುಂದೆ ರೈತರ ಸರದಿ, ನೂಕು-ನುಗ್ಗಾಟ ನಡೆದು, ಪೊಲೀಸರ ಬಂದೋಬಸ್ತ್ ನೊಂದಿಗೆ ದಿಗೆ ಗೊಬ್ಬರ ವಿತರಿಸಲಾಯಿತು.
ಕಳೆದ 8/10 ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಮೆಕ್ಕೆಜೋಳ, ಈರುಳ್ಳಿ, ಹತ್ತಿ ಸೇರಿ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅವಶ್ಯಕತೆಯಿದೆ. ಆದರೆ ಯೂರಿಯಾ ಗೊಬ್ಬರದ ಕೊರತೆಯಿಂದ ರೈತರು ದಿನವೂ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ. 4 ದಿನಗಳ ಹಿಂದಷ್ಟೇ ಪಟ್ಟಣದಲ್ಲಿ 200 ಟನ್ ಯೂರಿಯಾ ಬಂದಿದ್ದರೂ ಅನೇಕ ರೈತರಿಗೆ ಗೊಬ್ಬರ ಸಿಕ್ಕಿರಲಿಲ್ಲ. ಗುರುವಾರ ಪಟ್ಟಣದಲ್ಲಿ ಗೊಬ್ಬರ ಬಂದಿದೆ ಎಂಬ ಸುದ್ದಿ ತಿಳಿದು ಮಹಿಳೆಯರು, ಮಕ್ಕಳು ಸೇರಿ ನೂರಾರು ರೈತರು ದೌಡಾಯಿಸಿ ಅಂಗಡಿ ಮುಂದೆ ಜಮಾಯಿಸಿದ್ದರು.
ನೂಕುನುಗ್ಗಲು, ಪರಸ್ಪರ ವಾಗ್ವಾದಕ್ಕಿಳಿದ ಘಟನೆಗಳೂ ನಡೆದವು. ವಿಷಯ ತಿಳಿದ ಪೊಲೀಸರು ರೈತರನ್ನು ಸಾಲಿನಲ್ಲಿ ನಿಲ್ಲಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಪ್ರತಿ ರೈತರಿಗೆ 2 ಚೀಲ ಕೊಟ್ಟು ಸಮಾಧಾನಪಡಿಸಿದರಾದರೂ ಸರದಿ ಸಾಲಿನಲ್ಲಿ ನಿಂತಿದ್ದ ಎಲ್ಲರಿಗೂ ಗೊಬ್ಬರ ಲಭ್ಯವಾಗಲಿಲ್ಲ.
ಮೆಕ್ಕೆಜೋಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುತ್ತಿದ್ದು, ಈ ವರ್ಷ ಲಕ್ಷ್ಮೇಶ್ವರ ತಾಲೂಕಿನಲ್ಲಿಯೇ 16 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಅಲ್ಲದೇ ಲಕ್ಷ್ಮೇಶ್ವರಕ್ಕೆ ನೆರೆಯ ಕುಂದಗೋಳ, ಶಿರಹಟ್ಟಿ, ಶಿಗ್ಗಾಂವ, ಸವಣೂರ ತಾಲೂಕಿನ ರೈತರೂ ಗೊಬ್ಬರ ಖರೀದಿಗಾಗಿ ಬರುತ್ತಾರೆ. ಈ ಕಾರಣದಿಂದ ಪೂರೈಕೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಿದ್ದರಿಂದ ಗೊಬ್ಬರದ ಕೊರತೆ ಕಾಡುತ್ತಿದೆ.
ಈ ವರ್ಷ ಮಳೆ ಉತ್ತಮವಾಗಿ ಬೆಳೆ ಚೆನ್ನಾಗಿ ಬೆಳೆಯುತ್ತಿದೆ. ಸದ್ಯ ಗೊಬ್ಬರ ಹಾಕಿದರೆ ಉತ್ತಮ ಇಳುವರಿ ಬರುತ್ತದೆ. ಆದರೆ ಗೊಬ್ಬರವೇ ಸಿಗುತ್ತಿಲ್ಲ. ಗದಗ ಜಿಲ್ಲೆಗೆ ಗೊಬ್ಬರ ಪೂರೈಕೆಯಲ್ಲಿ ಪ್ರತಿಬಾರಿ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಅವಶ್ಯವಿರುವಷ್ಟು ಗೊಬ್ಬರವನ್ನು ಕಂಪನಿಯವರು ಪೂರೈಕೆ ಮಾಡುತ್ತಿಲ್ಲ. ಗೊಬ್ಬರ ಕಂಪನಿಗಳು ರೈತರ ಈ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ವ್ಯಾಪಾರಸ್ಥರಿಗೆ ಯೂರಿಯಾದೊಂದಿಗೆ ಇತರೇ ಕಾಂಪ್ಲೆಕ್ಸ್ ಗೊಬ್ಬರ ಖರೀದಿಸುವಂತೆ ಕಟ್ಟಳೆ ಹಾಕುತ್ತಿದ್ದಾರೆ. ಇದರಿಂದ ಅಂಗಡಿಕಾರರು ಗೊಬ್ಬರ ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.
“ರೈತರು ಸ್ಪರ್ಧೆಗಿಳಿದಂತೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುವುದರಿಂದ ಭವಿಷ್ಯದಲ್ಲಿ ಭೂಮಿ ಬರಡಾಗಿ ಮುಂದೆ ಯಾವುದೇ ಬೆಳೆ ಬರುವುದಿಲ್ಲ. ಮೆಕ್ಕೆಜೋಳದೊಂದಿಗೆ ಇತರೇ ಸಾಂಪ್ರದಾಯಿಕ ಬೆಳೆಯನ್ನು ರೈತರು ಮರೆಯಬಾರದು. ಯೂರಿಯಾ ಅಗತ್ಯವಿದ್ದಲ್ಲಿ ರೈತರು ಹರಳು ಯೂರಿಯಾಕ್ಕೆ ಮುಗಿಬೀಳುವ ಬದಲು ನ್ಯಾನೋ ಯೂರಿಯಾ ಬಳಸಬೇಕು”
– ರೇವಣಪ್ಪ ಮನಗೂಳಿ.
ಸಹಾಯಕ ಕೃಷಿ ನಿರ್ದೇಶಕರು, ಶಿರಹಟ್ಟಿ.
ಈ ನಡುವೆ ಗೊಬ್ಬರದ ಅಂಗಡಿಗಳಿಂದ ರೈತರ ಹೆಸರಿನಲ್ಲಿ ಕೆಲವರು ಯೂರಿಯಾ ಗೊಬ್ಬರ ಸಂಗ್ರಹಿಸಿ ಲಾಭಕ್ಕಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದು ಕೃತಕ ಅಭಾವಕ್ಕೆ ಕಾರಣವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.