ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ನಂದೀಶ್ವರ ನಗರದ ನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ನಗರ ಸರ್ವಾಂಗ ಸುಂದರವಾಗಿ ರೂಪುಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ಜರುಗಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ನಂದೀಶ್ವರ ನಗರದ 2 ಮತ್ತು 3ನೇ ಕ್ರಾಸ್ (ಇಂಡೋರ್ ಸ್ಟೇಡಿಯಂ ಬಡಾವಣೆಯ) ನಾಗರಿಕರ ವಿವಿಧೋದ್ದೇಶಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಸುಶಿಕ್ಷಿತರೂ, ಪ್ರಜ್ಞಾವಂತರೂ ನೆಲೆಸಿರುವ ನಂದೀಶ್ವರ ನಗರವನ್ನು ಅಭಿವೃದ್ಧಿಪಡಿಸಿ ಮಾದರಿ ನಗರವನ್ನಾಗಿಸಲು ನಾವೆಲ್ಲರೂ ಸೇರಿ ಕೆಲಸ ಮಾಡೋಣ. ಜೊತೆಗೆ ಇಂಡೋರ್ ಸ್ಟೇಡಿಯಂನ ಮೆರಗನ್ನು ಹೆಚ್ಚಿಸಲು ಶ್ರಮಿಸೋಣ ಎಂದರು.
ನಂದೀಶ್ವರ ನಗರದ 3ನೇ ಕ್ರಾಸ್‌ನ ರಸ್ತೆ ಬಹಳಷ್ಟು ಹಾಳಾಗಿದ್ದು, ತೆಗ್ಗು-ದಿಣ್ಣೆಗಳಿಂದಾಗಿ ವಾಹನ, ಜನ ಸಂಚರಿಸಲು ಬಾರದಂತಾಗಿದೆ. ಈ ರಸ್ತೆಯನ್ನು ತ್ವರಿತವಾಗಿ ಸಿಮೆಂಟ್ ರಸ್ತೆಯನ್ನಾಗಿ ಮಾಡಬೇಕು, ನಂದೀಶ್ವರ ನಗರಕ್ಕೆ ಒಂದು ಸುಂದರವಾದ ಉದ್ಯಾನವ ನಿರ್ಮಿಸಬೇಕು, ಶಾಲೆ ಹಾಗೂ ದೇವಸ್ಥಾನ ಇರುವ ವಸತಿ ಪ್ರದೇಶದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭವಾಗಿದ್ದು, ಇದನ್ನು ಬೇರೆಡೆ ಸ್ಥಳಾಂತರಿಸಲು ಅಗತ್ಯ ಕ್ರಮ ಜರುಗಿಸಬೇಕೆಂದು ಸಂಘವು ಸಚಿವರಿಗೆ ಮನವಿ ಸಲ್ಲಿಸಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ವಹಿಸಿದ್ದರು. ಸಂಘದ ಗೌರವ ಅಧ್ಯಕ್ಷ ಜಿ.ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ವ್ಹಿ. ಹಿರೇಮಠ ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ಬಸವರಾಜ ಎಚ್.ಕೊರ್ಲಹಳ್ಳಿ ನಿರೂಪಿಸಿದರು. ಕೊನೆಗೆ ವ್ಹಿ.ಎಸ್. ಶಿವಕಾಳಿಮಠ ವಂದಿಸಿದರು.
ವೇದಿಕೆಯ ಮೇಲೆ ನಗರಸಭಾ ಸದಸ್ಯೆ ವಿದ್ಯಾವತಿ ಗಡಗಿ, ಮಾಜಿ ಸದಸ್ಯ ಅನಿಲ ಗರಗ, ಜಿ.ಪಂ ಮಾಜಿ ಸದಸ್ಯ ಸಿದ್ದಲಿಂಗೇಶ ಪಾಟೀಲ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಹೇಶ ರಂಗಣ್ಣವರ, ದೇವಪ್ಪ ನಡವಲಗುಡ್ಡ, ಶಿವಾನಂದ ಪಲ್ಲೇದ, ಜೆ.ವ್ಹಿ. ಹಿರೇಮಠ, ಆರ್.ವ್ಹಿ. ಕರವೀರಮಠ, ಡಾ. ಈರಣ್ಣ ಹಳೆಮನಿ, ಕೆ.ವ್ಹಿ. ಯಾಳಗಿಶೆಟ್ರು, ನೀಲಕಂಠಯ್ಯ ಕಳ್ಳಿಮಠ, ಅಶೋಕ ಮಾಳೆಕೊಪ್ಪ, ಡಾ. ಕೃಷ್ಣಾ ನಾವಳ್ಳಿ, ವ್ಹಿ.ವ್ಹಿ. ಕವಲೂರ, ಲಿಂಗರಾಜ ಗೊಲ್ಲರ, ಡಾ.ರವೀಂದ್ರ ನಂದಿ, ಎಸ್.ಜಿ. ಪಲ್ಲೇದ, ಸುಭಾಸ ಗಡಾದ, ವ್ಹಿ.ಎಸ್. ಶಿವಕಾಳಿಮಠ, ಮಂಜುನಾಥ ಗಜಕೋಶ, ಡಿ.ಬಿ. ಚೆನ್ನಶೆಟ್ಟರ ಸೇರಿದಂತೆ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.
ಮನವಿ ಸ್ವೀಕರಿಸಿದ ಸಚಿವರು, ಬಡಾವಣೆಯ ಸೌಕರ್ಯಗಳ ಬೇಡಿಕೆಗಳ ಕುರಿತು ಸಂಬಂಧಿಸಿದವರಿಗೆ ಸೂಚನೆ ನೀಡಿ ತುರ್ತು ಕ್ರಮ ಜರುಗಿಸುವ ಭರವಸೆ ನೀಡಿದರಲ್ಲದೆ ಸುಂದರ ಉದ್ಯಾನವನ ನಿರ್ಮಾಣಕ್ಕೆ ತಿಂಗಳೊಳಗೆ ಕ್ರಮ ಕೈಗೊಳ್ಳುವದಾಗಿ ಹೇಳಿದರು.