ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಉಣಕಲ್ಲಿನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಸರ್ಕಾರದಿಂದ ಅಗತ್ಯ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಕರ್ನಾಟಕ ವಿಧಾನಸಭೆಯ ಉಪಸಭಾಪತಿ ಹಾಗೂ ವಿಧಾನಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ಹೇಳಿದರು.

Advertisement

ಗುರುವಾರ ಉಣಕಲ್ಲ ಪ್ರದೇಶದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ ಸದಸ್ಯರು ಭೇಟಿ ನೀಡಿದ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಅರ್ಜಿಗಳ ವಿಚಾರಣೆ ಜರುಗಿಸಿ, ಪತ್ರಿಕಾಗೋಷ್ಠಿ ಜರುಗಿಸಿ ಅವರು ಮಾತನಾಡಿದರು.

ಈ ಮೊದಲೇ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲಾಗಿದೆ. ನಿವಾಸಿಗಳು ಸಹ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗದ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಪುರಾತತ್ವ ಇಲಾಖೆ ಅಧಿಕಾರಿಗಳು ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ಹೀಗಾಗಿ ಬೇರೆ ಕಡೆಯಲ್ಲಿ ಜಾಗ ಕೊಟ್ಟರೆ ಇಲ್ಲಿಂದ ಸ್ಥಳಾಂತರವಾಗುತ್ತೇವೆ ಎಂದು ಕೆಲವರು ಹೇಳಿದ್ದಾರೆ. ಈ ವಿಷಯವನ್ನು ಸಮಿತಿಯ ಮುಂದಿಟ್ಟು, ಪರಿಹಾರ ಕಂಡುಕೊಳ್ಳಬೇಕು. ದೇವಸ್ಥಾನ ಅಭಿವೃದ್ಧಿ ಕುರಿತು ಯೋಜನೆ ರೂಪಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಎಲ್ಲ ವಿಷಯಗಳ ಬಗ್ಗೆ ಸುಲಲಿತವಾಗಿ ಚರ್ಚೆ ನಡೆಸಲಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಿರೀಕ್ಷಣಾ ಪ್ರಮಾಣ ಪತ್ರ ನೀಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

ದೇವಸ್ಥಾನ ಅಭಿವೃದ್ಧಿಗೆ ಸರ್ಕಾರದ ಸಹಾಯ ಅವಶ್ಯಕವಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ, ಕಟ್ಟಡ ನಿರ್ಮಾಣ, ಇತರೆ ಕಾಮಗಾರಿಗೆ ಸುಮಾರು ರೂ.25 ಕೋಟಿ ಅನುದಾನವನ್ನು ನೀಡುವಂತೆ ಮನವಿ ಮಾಡಲಾಗುವುದು. ಸುಮಾರು 56 ರಿಂದ 58 ಮನೆಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿಯ ಸದಸ್ಯರು, ಶಾಸಕರಾದ ಎನ್. ಸುರೇಶಕುಮಾರ, ಎ. ಮಂಜು, ಸಿ.ಎನ್. ಬಾಲಕೃಷ್ಣ, ಹೆಚ್.ಡಿ. ತಮ್ಮಯ್ಯ, ಅವಿನಾಶ ಜಾಧವ, ದರ್ಶನ ಪುಟ್ಟಣ್ಣಯ್ಯ ಹಾಗೂ ಮಹಾಪೌರರಾದ ಜ್ಯೋತಿ ಪಾಟೀಲ, ಉಪಮಹಾಪೌರ ಸಂತೋಷ್ ಚವ್ಹಾಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಪಾಲಿಕೆ ಆಯುಕ್ತರಾದ ಡಾ. ರುದ್ರೇಶ ಘಾಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ್ ಬಿರಾದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಹುಬ್ಬಳ್ಳಿ ನಗರ ತಹಸೀಲ್ದಾರ ಮಹೇಶ್ ಗಸ್ತೆ ಸೇರಿದಂತೆ ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಪ್ರವಾಸೋದ್ಯಮ, ಪುರಾತತ್ವ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಭೂದಾಖಲೆಗಳ ಇಲಾಖೆ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಕುರಿತು ನಿರಂತರ ಅಧ್ಯಯನ ಮಾಡಲಾಗಿದೆ. ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆ ಜಂಟಿ ಸರ್ವೇ ಕಾರ್ಯ ಮಾಡಿವೆ. ದೇವಸ್ಥಾನ ಅಭಿವೃದ್ಧಿ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ದೇವಸ್ಥಾನ ವಿನ್ಯಾಸಕ್ಕೆ ಒಪ್ಪಿಗೆ ಸೂಚಿಸಿದೆ. ಸುಮಾರು ರೂ.17 ರಿಂದ 18 ಕೋಟಿ ಹಣ ಪರಿಹಾರ ನೀಡಲು ಹಾಗೂ ರೂ. 7 ಕೋಟಿ ಹಣ ಅಭಿವೃದ್ಧಿಗೆ ಅವಶ್ಯಕವಾಗಿದೆ. ಇಂದಿನ ಸಭೆಯಲ್ಲಿ ಸುಮಾರು 5 ಅರ್ಜಿಗಳನ್ನು ಸಮಿತಿಯು ಚರ್ಚಿಸಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here