ರಾಜ್ಯದಲ್ಲಿ ಮರುಗಣತಿ ಮಾಡಲು ಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ನವದೆಹಲಿ: ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಅವರು ಶುಕ್ರವಾರ ನವದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬ ಪ್ರಜೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯಗತ್ಯ. ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಬೇಕೆಂದು ರಾಹುಲ್ ಗಾಂಧಿಯವರು ಬದ್ಧರಾಗಿದ್ದಾರೆ. ಕೇವಲ ಜಾತಿಗಣತಿ ಮಾಡುವ ಜೊತೆಗೆ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಿದಾಗ ಮಾತ್ರ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಎಐಸಿಸಿನ ಓಬಿಸಿ ಸಲಹಾ ಮಂಡಳಿಯಲ್ಲಿ ನಾನು ಓರ್ವ ಸದಸ್ಯನಾಗಿದ್ದು, ಜುಲೈ 15 ಹಾಗೂ 16ರಂದು ಬೆಂಗಳೂರಿನಲ್ಲಿ ಮಂಡಳಿಯ ಪ್ರಥಮ ಸಭೆ ನಡೆದಿತ್ತು. ಸಭೆಯಲ್ಲಿ ಬೆಂಗಳೂರು ಘೋಷಣೆ ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. 2015ರಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ರಾಜ್ಯ ಕರ್ನಾಟಕ. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಜಾತಿಗಣತಿ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಹತ್ತು ವರ್ಷಗಳ ಹಳೆಯ ಅಂಕಿ-ಅಂಶಗಳಾದ್ದರಿಂದ ಕಾನೂನಿನನ್ವಯ ಮರುಗಣತಿ ಮಾಡುವ ಅಗತ್ಯವಿದ್ದು, ಸರ್ಕಾರ ಕರ್ನಾಟಕದಲ್ಲಿ ಮರುಗಣತಿ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಈ ಸಮೀಕ್ಷೆ ಕೇವಲ ಓಬಿಸಿ ವರ್ಗಕ್ಕೆ ಸಂಬAಧಿಸಿದ್ದಲ್ಲ. ಕರ್ನಾಟಕ ಎಲ್ಲ ಏಳು ಕೋಟಿ ಜನರ ಸಮೀಕ್ಷೆ ನಡೆಯುತ್ತದೆ ಎಂದರು.

ಎಐಸಿಸಿ-ಒಬಿಸಿ ಸಭೆ ಸಭೆಯ ಬಗ್ಗೆ ಬಿಜೆಪಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿ ಎಂದೂ ಇರಲಿಲ್ಲ. ಮಂಡಲ್ ಆಯೋಗದ ವರದಿಯನ್ನು ಬಿಜೆಪಿ ವಿರೋಧಿಸಿತ್ತು. ಮಂಡಲ್‌ಗೆ ಪ್ರತಿಯಾಗಿ ಕಮಂಡಲ ಯಾತ್ರೆ ಶುರು ಮಾಡಿದ್ದು ಯಾರು, ಆ ಸಂದರ್ಭದಲ್ಲಿ 200 ಆತ್ಮಹತ್ಯೆಗಳಿಗೆ ಪ್ರಚೋದನೆ ಕೊಟ್ಟವರು ಯಾರು, 1993ರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದು ಯಾರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಸಂವಿಧಾನವನ್ನು ಯಾವಾಗ ಗೌರವಿಸಿದ್ದಾರೆ ಎಂದು ಕಿಡಿಕಾರಿದರು.

ಭಾರತ ಸರ್ಕಾರವು ಯೂರಿಯಾ ಮತ್ತಿತರ ರಸಗೊಬ್ಬರಗಳನ್ನು ಎಲ್ಲಾ ರಾಜ್ಯಗಳಿಗೆ ಸರಬರಾಜು ಮಾಡಬೇಕು. ಈ ವರ್ಷ ಭಾರತ ಸರ್ಕಾರವು ಸರಬರಾಜು ಮಾಡಿರುವ ರಸಗೊಬ್ಬರವು ಸಾಕಾಗುತ್ತಿಲ್ಲ. ರಾಜ್ಯದಲ್ಲಿ ಮುಂಗಾರು ಅವಧಿಗೂ ಮುನ್ನವೇ ಪ್ರಾರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಈ ವರ್ಷ ಹೆಚ್ಚಾಗಿದೆ. ಜಲಾನಯನ ಪ್ರದೇಶಕ್ಕೆ ನೀರನ್ನು ಈಗಾಗಲೇ ಹಾಯಿಸಲಾಗಿದೆ. ಹಾಗಾಗಿ ರೈತರು ಹೆಚ್ಚು ರಸಗೊಬ್ಬರವನ್ನು ಬಳಸುತ್ತಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ ಎಂದು ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿಗಳು ವಿವರಿಸಿದರು.


Spread the love

LEAVE A REPLY

Please enter your comment!
Please enter your name here