ಕಲಬುರ್ಗಿ:- ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಗಲಾಟೆ ಮಾಸುವ ಮುನ್ನವೇ, ನಿನ್ನೆ ಕಲಬುರಗಿ ಜಿಲ್ಲೆಯಲ್ಲೂ ಅದೇ ರೀತಿಯ ಉದ್ವಿಗ್ನ ಘಟನೆ ನಡೆದಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ತೀವ್ರ ಗಲಾಟೆ ನಡೆದಿದ್ದು, ಗ್ರಾಮವನ್ನೇ ಉದ್ವಿಗ್ನತೆಯ ವಾತಾವರಣ ಆವರಿಸಿದೆ.
ರಾವೂರ್ ಗ್ರಾಮದ ಗಣೇಶ ಕಟ್ಟೆ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಸಂದರ್ಭದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಡಿಜೆ ಸೌಂಡ್ಗೆ ಹಿಂದೂ ಕಾರ್ಯಕರ್ತರು ನೃತ್ಯ ಮಾಡುತ್ತಿದ್ದರು. ಈ ವೇಳೆ ಸೌಂಡ್ ಕಡಿಮೆ ಮಾಡುವಂತೆ ಹೇಳಿದ ಮಾತಿನಿಂದ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಕಲ್ಲು ಹಾಗೂ ಕಟ್ಟಿಗೆಗಳಿಂದ ಹೊಡೆದಾಟಕ್ಕೆ ತಿರುಗಿದೆ. ಈ ಗಲಾಟೆಯಲ್ಲಿ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಘಟನೆ ವೇಳೆ ಕಲ್ಲು ತೂರಾಟ ನಡೆದಿರುವುದು ಹಾಗೂ ಮನೆಯ ಮಾಳಿಗೆಯ ಮೇಲೆ ಬಾಲಕನೊಬ್ಬ ಕಲ್ಲು ಹಿಡಿದು ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಎರಡೂ ಸಮುದಾಯಗಳಿಂದ ದೂರು–ಪ್ರತಿದೂರುಗಳು ದಾಖಲಾಗದ ಕಾರಣ, ವಾಡಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎನ್ಎಸ್ 126 ಕಾಯ್ದೆಯಡಿ ಎರಡು ಸಮುದಾಯಗಳಿಗೆ ಸೇರಿದ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಅಡ್ಡೂರು ಶ್ರೀನಿವಾಸಲು, ಶಿವಾಜಿ ಜಯಂತ್ಯೋತ್ಸವ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ. ದೂರುಗಳು ದಾಖಲಾಗದ ಹಿನ್ನಲೆಯಲ್ಲಿ ವಾಡಿ ಪೊಲೀಸ್ ಠಾಣೆಯಿಂದ ಸುಮೋಟೋವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.



