ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸ್ ಇಲಾಖೆ 8 ಮಂದಿಯನ್ನು ಬಂಧಿಸಿದೆ.
ಜಿಲ್ಲಾ ಎಸ್‌ಪಿ ಸಿದ್ದಾರ್ಥ ಗೋಯಲ್ ಮಾತನಾಡಿ, ವಿಡಿಯೋ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು. ರಾತ್ರಿ 10:06ಕ್ಕೆ ಕಲ್ಲು ಎಸೆಯಲ್ಪಟ್ಟಿದ್ದು, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 7 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ರಾತ್ರಿ 9:30ಕ್ಕೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಕೆಲವರು ಅಲ್ಲೇ ಉಳಿದಿದ್ದರು. ಅವರಲ್ಲಿ ತನ್ವೀರ್ ಎಂಬಾತ ಉದ್ದೇಶಪೂರ್ವಕವಾಗಿ ಕಲ್ಲು ಎಸೆದಿದ್ದಾನೆ. ಕಲ್ಲು ಎಸ್‌ಪಿ ಹಾಗೂ ಇಬ್ಬರು ಕಾನ್‌ಸ್ಟೇಬಲ್ ಮೇಲೆ ಬಿದ್ದರೂ ಹೆಲ್ಮೆಟ್ ಧರಿಸಿದ್ದರಿಂದ ಗಾಯ ತಪ್ಪಿದೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಎರಡೂ ಗುಂಪಿನ ಹಿರಿಯರು ಸಹಕಾರ ನೀಡಿದ್ದಾರೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.



