ಬೆಂಗಳೂರು: ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವಂತಹ ಬಿಜೆಪಿ- ಜೆಡಿಎಸ್ ಪಕ್ಷಗಳ ರಾಜಕೀಯ ಒಳಒಪ್ಪಂದವನ್ನು ಕಾಂಗ್ರೆಸ್ ಸರ್ಕಾರ ನಿಷ್ಪಕ್ಷಪಾತ ಎಸ್ಐಟಿ ತನಿಖೆ ಮೂಲಕ ವಿಫಲಗೊಳಿಸಿದೆ. ಇದೆಲ್ಲವೂ ಪ್ರತಿಪಕ್ಷಗಳ ರಾಜಕೀಯ ನಾಟಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಮ್ಮ ರಕ್ತದಾಹ ನಿಲ್ಲಿಸಿ, ಕ್ಷೇತ್ರದ ಪಾವಿತ್ರ್ಯತೆ ಉಳಿಸಿ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಹರಿಹಾಯ್ದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು.
ಧರ್ಮಸ್ಥಳಕ್ಕೆ ಬಿಜೆಪಿಯವರು ಭೇಟಿ ಜೊತೆಗೆ ಸೌಜನ್ಯ ಅವರ ಮನೆಗೂ ಭೇಟಿ ನೀಡಿದ ಬಗ್ಗೆ ಕೇಳಿದಾಗ, “ಯಾತ್ರೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳೂ ಸಹ ಶ್ರೀಕ್ಷೇತ್ರವನ್ನು ಒಪ್ಪಿ ಮಾತನಾಡಿಲ್ಲ. ಕೇವಲ ಸ್ವಾಮಿ ಮಂಜುನಾಥನ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆಗ ಸುಖಾಸುಮ್ಮನೆ ಆರೋಪಗಳನ್ನು ಮಾಡಿ, ಈಗ ಕೊಳಕು ರಾಜಕಾರಣದಿಂದ ಆಚೆ ಬರಲು ಧರ್ಮಸ್ಥಳದ ಯಾತ್ರೆ ಮಾಡಲಾಗಿದೆ. ಇದು ಕ್ಷೇತ್ರದ ಮೇಲೆ ಇರುವ ಗೌರವದಿಂದ ಮಾಡಿರುವ ಯಾತ್ರೆಯಲ್ಲ” ಎಂದರು.
“ಬಿಜೆಪಿ- ಜೆಡಿಎಸ್ ಅವರು ಏತಕ್ಕೆ ಯಾತ್ರೆ ಮಾಡಿದ್ದಾರೆ. ಯಾರಿಗೆ ಸಾಂತ್ವನ ಹೇಳಲು ಯಾತ್ರೆಗೆ ಹೋಗಿದ್ದಾರೆ ಎಂದು ಪ್ರಶ್ನೆಸಿದ ಸುರೇಶ್ ಅವರು, ಬಿಜೆಪಿಯವರ ರಾಜಕೀಯ ಬೇಳೆ ಅಲ್ಲಿ ಬೇಯುವುದಿಲ್ಲ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಬಿಜೆಪಿಗರ ರಾಜಕೀಯ ಒಳ ಒಪ್ಪಂದಗಳನ್ನು ಅರಿತಿದ್ದಾರೆ” ಎಂದರು.
“ಈ ಹಿಂದೆಯೂ ಸೌಜನ್ಯ ಅವರ ಮನೆಗೆ ತೆರಳಿ ಸಾಂತ್ವನವೆಂಬ ನಾಟಕವಾಡಿ ಯಾವ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎನ್ನುವುದು ದಾಖಲೆಗಳಲ್ಲಿದೆ. ಈಗಲೂ ಸಹ ಇದೇ ರೀತಿಯ ವ್ಯವಸ್ಥೆ ರೂಪಿಸಿ ಜನರನ್ನು ಮರುಳು ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ರಾಜಕೀಯ ಮಾಡುವವರಿಗೆ ನಾಚಿಕೆಯಾಗಬೇಕು
“ಧರ್ಮಸ್ಥಳ ಕ್ಷೇತ್ರ ರಾಜಕೀಯ ವಸ್ತುವಲ್ಲ. ಶ್ರೀ ಕ್ಷೇತ್ರದ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು. ಸೌಜನ್ಯ ಪ್ರಕರಣ ಸೇರಿದಂತೆ ಅನೇಕ ಆರೋಪಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚಿತವಾಗಿಯೂ ನಡೆದಿತ್ತು. ಈ ಆರೋಪಗಳು ಬಂದಂತಹ ಸಂದರ್ಭದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಯಾವುದೇ ರೀತಿಯ ಹೇಳಿಕೆ ನೀಡಿದ ಉದಾಹರಣೆಗಳು ಎಲ್ಲಿಯೂ ಇಲ್ಲ” ಎಂದರು.
“ನಿಷ್ಪಕ್ಷವಾಗಿ ಎಸ್ ಐಟಿ ತನಿಖೆ ನಡೆದ ನಂತರ ಏಕಾಏಕಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ, ಈ ಕ್ಷೇತ್ರದ ಪರವಾಗಿ ನಾವಿದ್ದೇವೆ ಎಂದು ಅವರು ಹೇಳಿದ ನಂತರ, ಬಿಜೆಪಿ ಹಾಗೂ ಜೆಡಿಎಸ್ ನವರು ಈ ತರಾತುರಿಯಲ್ಲಿ ಯಾತ್ರೆ ಮಾಡಿದ್ದಾರೆ” ಎಂದು ಜರಿದರು.
ಇದು ಆರ್ ಎಸ್ ಎಸ್ ನ ಎರಡು ಬಣಗಳ ಕಿತ್ತಾಟವೇ ಎಂದು ಕೇಳಿದಾಗ, “ಈ ವಿಚಾರ ಎಲ್ಲರಿಗೂ ತಿಳಿದಿದೆ. ಈ ವಿಚಾರ ಏಕೆ ಉಲ್ಬಣವಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಗೆ ಹೋದರೆ ತಿಳಿಯುತ್ತದೆ. ಆರ್ ಎಸ್ ಎಸ್ ಹಾಗೂ ಬಿಜೆಪಿಯ ಎರಡು ಬಣಗಳ ವಿಚಾರ ಇರಬಹುದು. ಇವರ ನಾಟಕ ಇಲ್ಲಿಗೆ ನಿಲ್ಲಬೇಕು” ಎಂದರು.
ಸೌಜನ್ಯ ಕುಟುಂಬದವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರೆ ಖರ್ಚು ವೆಚ್ಚ ನೀಡುವುದಾಗಿ ವಿಜಯೇಂದ್ರ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಅವರನ್ನೇ ಕೇಳಬೇಕು. ಏತಕ್ಕಾಗಿ ಈ ಪ್ರಕರಣದ ಖರ್ಚು ವೆಚ್ಚ ಭರಿಸುತ್ತೀರಿ? ಇಂತಹ ಹೇಳಿಕೆಯನ್ನು ಈ ಹಿಂದೆಯೂ ನೀಡಲಾಗಿತ್ತು. ಇವರಿಗೆ ರಾಜಕೀಯ ನೆನಪುಗಳು ಕಡಿಮೆ ಇರಬೇಕು” ಎಂದರು.