ದಾಸ್ತಿಕೊಪ್ಪದಲ್ಲಿ ತಡೆರಹಿತ ಬಸ್ ನಿಲ್ಲಿಸಿ: ಎಸ್.ಆರ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆಯಿದ್ದು, ಮಹಿಳಾ ಪ್ರಯಾಣಿಕರು, ಸರ್ಕಾರಿ ಮಹಿಳಾ ನೌಕರರು ಮತ್ತು ವಿದ್ಯಾರ್ಥಿನಿಯರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ದಿನನಿತ್ಯ ಧಾರವಾಡ ಹಾಗೂ ಹುಬ್ಬಳ್ಳಿಯಿಂದ ದಾಸ್ತಿಕೊಪ್ಪದಲ್ಲಿರುವ ಸರ್ಕಾರಿ ಪದವಿ, ಪದವಿಪೂರ್ವ, ಐಟಿಐ ಮತ್ತು ಮೊರಾರ್ಜಿ ವಸತಿ ಶಾಲೆ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಸಂಚರಿಸುತ್ತಾರೆ. ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಬಸ್ ನಿಲ್ದಾಣದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯಿಂದ ಕಲಘಟಗಿಗೆ ಬರುವ ತಡೆರಹಿತ ಬಸ್‌ಗಳಿಗೆ ನಿಲುಗಡೆ ನೀಡಲು ಕ್ರಮವಹಿಸಬೇಕೆಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

Advertisement

ಅವರು ಶುಕ್ರವಾರ ಬೆಳಿಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಜರುಗಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಲಘಟಗಿ ತಾಲೂಕಾಧ്യക്ഷ ಬಸಪ್ಪ ಮಹಾಬಳೇಶ್ವರ ಬಾವಕಾರ ಮಾತನಾಡಿ, ಕಲಘಟಗಿ ಸರ್ಕಾರಿ ಕಾಲೇಜಿನಲ್ಲಿ ಯುವನಿಧಿ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳಾ ನೌಕರರು ದಾಸ್ತಿಕೊಪ್ಪದಲ್ಲಿ ತಡೆರಹಿತ ಬಸ್‌ಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಪ್ರತಿದಿನ ಸಾವಿರಾರು ಸಿಬ್ಬಂದಿಗಳು, ನೌಕರರು ಹುಬ್ಬಳ್ಳಿ ಮತ್ತು ಧಾರವಾಡದಿಂದ ಕಲಘಟಗಿಗೆ ಬಂದು ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಬೆಳಿಗ್ಗೆ 8.30ರಿಂದ 9.30ರವರೆಗೆ ಮತ್ತು ಸಂಜೆ 4.30ರಿಂದ 5.30ರವರೆಗೆ ಹುಬ್ಬಳ್ಳಿ ಮತ್ತು ಧಾರವಾಡ ಡಿಪೋಗಳಿಂದ ಸಂಚರಿಸುವ ತಡೆರಹಿತ ಬಸ್‌ಗಳನ್ನು ದಾಸ್ತಿಕೊಪ್ಪ ಬಸ್ ನಿಲ್ದಾಣದಲ್ಲಿ ನಿಲುಗಡೆ ಆಗುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮುರಗಯ್ಯಾ ವಿರಕ್ತಮಠ, ರೇಹಾನ್ ರಝಾ ಐನಾಪೂರಿ, ರತ್ನಾ ತೇಗೂರಮಠ, ಸುಧೀರ ಎಸ್. ಬೋಳಾರ ಇದ್ದರು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಅರವಿಂದ ಏಗನಗೌಡರ, ಶಿವಾನಂದ ಭೂಮಣ್ಣವರ, ಸಾವಿತ್ರಿ ಬಸವರಾಜ ಭಗವತಿ, ಗೀತಾ ಥಾವಂಶಿ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಜಿ.ಪಂ ಅಧಿಕಾರಿ ವಿನೋದ ಕಂಠಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ದಾಸ್ತಿಕೊಪ್ಪದಲ್ಲಿ ಬಸ್ ನಿಲುಗಡೆಗೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರು ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಹುದಿನಗಳ ಈ ಬೇಡಿಕೆಯನ್ನು ಪರಿಶೀಲಿಸಿ, ತಕ್ಷಣ ಕ್ರಮವಹಿಸಬೇಕೆಂದು ಎಸ್.ಆರ್. ಪಾಟೀಲ ಹೇಳಿದರು.


Spread the love

LEAVE A REPLY

Please enter your comment!
Please enter your name here