ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ನೂರಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿರುವ ಕಾಂತರ ಸಿನಿಮಾಗೆ ಪರಭಾಷೆಯ ಮಂದಿಯೂ ಹ್ಯಾಟ್ಸ್ ಆಫ್ ಹೇಳ್ತಿದ್ದಾರೆ. ಆದ್ರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದ ನಂತರ ಕೆಲವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದು ಕೆಲ ದೈವಾರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಈ ಬಗ್ಗೆ ದೈವದ ಮೊರೆ ಹೋಗಲು ಆರಾಧಕರು ನಿರ್ಣಯಿಸಿದ್ದಾರೆ.
‘ಕಾಂತಾರ’ ಸಿನಿಮಾನಲ್ಲಿ ದೈವಾರಾಧನೆಯನ್ನು ಬಳಕೆ ಮಾಡಿರುವುದಕ್ಕೆ ಹಾಗೂ ಸಿನಿಮಾನಲ್ಲಿ ಪಂಜುರ್ಲಿ, ಗುಳಿಗ ಮತ್ತುಪಿಲಿ ದೈವಗಳ ಬಳಕೆ ಮಾಡಿರುವುದಕ್ಕೆ, ದೈವದ ಆವೇಶ ಮತ್ತು ದೈವ ನರ್ತನದ ಬಳಕೆಯ ಬಗ್ಗೆ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವಾರಾಧಕರು ಸಿನಿಮಾದ ವಿರುದ್ಧ ದೈವಕ್ಷೇತ್ರದಲ್ಲಿ ದೂರು ನೀಡಲಿದ್ದಾರೆ. ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.
ಮಂಗಳೂರಿನ ಹೊರವಲಯದ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರಿಂದ ಇಂದು (ಅಕ್ಟೋಬರ್ 09) ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ದೈವದ ಎದುರು ಸಿನಿಮಾ ಬಗ್ಗೆ ದೂರು ಸಲ್ಲಿಸಲಾಗುತ್ತಿದೆ. ಹಾಗೂ ದೈವದ ಅನುಕರಣೆ, ಅಪಹಾಸ್ಯ, ವ್ಯಂಗ್ಯ ಮಾಡುವವರ ವಿರುದ್ಧವೂ ದೂರು ಸಲ್ಲಿಕೆ ಆಗಲಿದೆ.
ಅಂದ ಹಾಗೆ ದೈವದ ಬಳಿ ದೂರು ನೀಡುವುದು ಕರಾವಳಿ, ಮಲೆನಾಡು ಭಾಗದಲ್ಲಿ ನಡೆದುಕೊಂಡು ಬಂದಿರುವ ನಂಬಿಕೆಯಾಗಿದೆ.