ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಿಸುವ ವೇಳೆ ನನ್ನ ಮಗನನ್ನು ಪರಿಗಣಿಸಲಿಲ್ಲ ಎಂದು ಆರೋಪಿಸಿ ಸುರೇಶ ಬಸವನಾಯ್ಕರ್ ಎಂಬಾತ ತನ್ನ ಮೈಗೆ ಮಲ ಬಳಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಪುರಸಭೆ ಮುಂದೆ ಸುರೇಶ ಬಸವನಾಯ್ಕರ್ ಎಂಬ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಮಲ ತಂದು ತನ್ನ ಮುಖ, ತಲೆ, ಮೈ-ಕೈ ಮೇಲೆ ಸವರಿಕೊಂಡು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾನೆ. ಈ ವೇಳೆ ಆತನನ್ನು ಮಾತನಾಡಿಸಿದಾಗ, ಪಟ್ಟಣದ ಪುರಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಪಾಯಿ ಕರ್ಮಚಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಆಗಲೂ ನನಗೆ ಪುರಸಭೆಯಲ್ಲಿ ಖಾಯಂ ಮಾಡಿಕೊಳ್ಳಲಿಲ್ಲ. ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಪಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದೇನೆ.
ಕಳೆದ ಕೆಲ ತಿಂಗಳ ಹಿಂದೆ ಪುರಸಭೆಯ ಆಡಳಿತ ಮಂಡಳಿ ಗುತ್ತಿಗೆ ಆಧಾರದ ಮೇಲೆ ಸುಮಾರು 10ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಗಲಾದರೂ ನನ್ನ ಮಗನಿಗೆ ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಮನವಿ ಮಾಡಿದ್ದರೂ ಯಾರೂ ಸ್ಪಂದಿಸುವ ಕಾರ್ಯ ಮಾಡಿಲ್ಲ. ಆದರೆ ನನ್ನ ಮಗನನ್ನು ಬಿಟ್ಟು ಬೇರೆಯವರನ್ನು ನೇಮಕ ಮಾಡಲಾಗಿದೆ. ಇದರಿಂದ ಬೇಸತ್ತು ಪುರಸಭೆ ಎದುರು ಮೈ ಮೇಲೆ ಮೇಲೆ ಸುರಿದು ಕೊಂಡು ಪ್ರತಿಭಟನೆ ನಡೆಸಿದ್ದೇನೆ ಎಂದಿದ್ದಾನೆ.
ಈ ವ್ಯಕ್ತಿಯ ವಿಚಿತ್ರ ವರ್ತನೆಯಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸುರೇಶನ ಮನವೊಲಿಸಿ ಪ್ರತಿಭಟನೆ ಕೈಬಿಟ್ಟು ಮನೆಗೆ ಕಳುಹಿಸಿದರು. ಆದರೆ, ಈ ವ್ಯಕ್ತಿಯ ಪ್ರತಿಭಟನೆ ನ್ಯಾಯಯುತವೇ ಎಂಬುದು ಯಕ್ಷಪ್ರಶ್ನೆಯಾಗಿದೆ.