ಥೈಲ್ಯಾಂಡ್ನಲ್ಲಿ ನಡೆದ ಒಂದು ವಿಶಿಷ್ಟ ವಿವಾಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
37 ವರ್ಷದ ಥಾಯ್ ಮಹಿಳೆ ಡುವಾಂಗ್ಡುವಾನ್ ಕೆಟ್ಸಾರೊ ಎಂಬವರು ಆಸ್ಟ್ರಿಯಾದ ಇಬ್ಬರು ಪುರುಷರನ್ನು ಒಂದೇ ಮಂಟಪದಲ್ಲಿ ವಿವಾಹವಾಗಿದ್ದಾರೆ. ಈ ಅಸಾಮಾನ್ಯ ಮದುವೆ ಕುತೂಹಲದ ಜೊತೆಗೆ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾದ ಕರಾವಳಿ ನಗರ ಪಟ್ಟಾಯದಲ್ಲಿ ಕೆಲಸ ಮಾಡುತ್ತಿದ್ದಾಗ ಡುವಾಂಗ್ಡುವಾನ್ ಮೊದಲಿಗೆ ಆಸ್ಟ್ರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಅವರನ್ನು ಭೇಟಿಯಾದರು. ಐದು ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಆಕೆ ಆಸ್ಟ್ರಿಯಾದ ಮತ್ತೊಬ್ಬ ಪೊಲೀಸ್ ಅಧಿಕಾರಿ ಮ್ಯಾಕಿಯನ್ನು ಪರಿಚಯಿಸಿಕೊಂಡಳು. ಈ ವಿಷಯವನ್ನು ರೋಮನ್‌ಗೆ ತಿಳಿಸಿದರೂ, ಮೂವರೂ ಜಗಳವಾಡದೇ ಪರಸ್ಪರ ಒಪ್ಪಿಗೆ ನೀಡಿ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದರು.
ಮದುವೆ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಡುವಾಂಗ್ಡುವಾನ್ ತನ್ನ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದಳು. ಮೂರು ಹೆಣ್ಣುಮಕ್ಕಳ ತಾಯಿ ಆಗಿರುವ ಆಕೆ, ಹಿಂದಿನ ವಿವಾಹದಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಾಳೆ. ಮೊದಲ ಮದುವೆ ಮುರಿದುಬಿದ್ದ ಬಳಿಕ ಕುಟುಂಬವನ್ನು ಪೋಷಿಸಲು ಪಟ್ಟಾಯದಲ್ಲಿ ಕೆಲಸ ಪ್ರಾರಂಭಿಸಿದ್ದಳು. ಈ ಅವಧಿಯಲ್ಲಿ ಇಬ್ಬರೂ ಪುರುಷರು ಕುಟುಂಬದ ಜವಾಬ್ದಾರಿಗಳನ್ನು ಹಂಚಿಕೊಂಡು ನೆರವಾಗಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರೂ ಸಂಗಾತಿಗಳ ಬದ್ಧತೆ ಮತ್ತು ಬೆಂಬಲವನ್ನು ಕಂಡ ಬಳಿಕ ಆಕೆಯ ಸಂಬಂಧಿಕರೂ ಈ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಮದುವೆ ಸಮಾರಂಭ ಸಣ್ಣ ಹಾಗೂ ಆತ್ಮೀಯ ವಾತಾವರಣದಲ್ಲಿ ನಡೆಯಿತು. ಸಾಂಪ್ರದಾಯಿಕ ಥಾಯ್ ಮದುವೆಯ ವಿಧಿವಿಧಾನಗಳನ್ನೂ ಈ ಕಾರ್ಯಕ್ರಮದಲ್ಲಿ ಪಾಲಿಸಲಾಯಿತು.
ವರದಿಗಳ ಪ್ರಕಾರ, ಇಬ್ಬರು ವರರು ತಲಾ ಒಂದು ಮಿಲಿಯನ್ ಥಾಯ್ ಬಹ್ತ್ ವಧುದಕ್ಷಿಣೆಯಾಗಿ ನೀಡಿದ್ದಾರೆ. ಇದು ಒಟ್ಟು ಸುಮಾರು 29 ಲಕ್ಷ ರೂಪಾಯಿಗಳಿಗೆ ಸಮಾನವಾಗುತ್ತದೆ. ವಿಚಿತ್ರ ಸ್ವರೂಪದ ಈ ವಿವಾಹ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.



