ಗದಗ:- ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 7 ವರ್ಷದ ಬಾಲಕಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣದ ಹಿಂಭಾಗದ ಎಸ್ಪಿ ಕಚೇರಿ ಬಳಿ ಜರುಗಿದೆ.
ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 7 ವರ್ಷದ ಶ್ರೇಯಾ ಕೇಶವ ನೆಗಳೂರ ನಾಯಿ ದಾಳಿಗೆ ಒಳಗಾದ ಬಾಲಕಿ. ಶಾಲೆಯಿಂದ ಆಟೋ ರಿಕ್ಷಾದಲ್ಲಿ ಬಂದಿದ್ದ ಶ್ರೇಯಾ, ರಿಕ್ಷಾದಿಂದ ಇಳಿದು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ 6-7 ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ನಾಯಿಗಳು ತೀವ್ರವಾಗಿ ಕಚ್ಚಿದ್ದರಿಂದ ಬಾಲಕಿಯ ತಲೆ, ಕಣ್ಣು, ಮುಖ ಹಾಗೂ ಕೈ-ಕಾಲುಗಳ ಮೇಲೆ ಗಂಭೀರ ಗಾಯಗಳಾಗಿವೆ.
ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಾಯಗಳು ತೀವ್ರವಾಗಿದ್ದರಿಂದ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಗೆ ರಿಕ್ಷಾ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಬಾಲಕಿಯನ್ನು ಸುರಕ್ಷಿತವಾಗಿ ಮನೆಯ ಹತ್ತಿರ ಬಿಡದೆ ದೂರ ಇಳಿಸಿದ್ದೇ ನಾಯಿಗಳ ದಾಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿಯ ತಂದೆ, ಕಾಲೇಜು ಉಪನ್ಯಾಸಕರಾಗಿರುವ ಕೇಶವ ನೆಗಳೂರ ಅವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.