ತುಮಕೂರು: ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಒಂಟಿಯಾಗಿ ಓಡಾಡಂಗಿಲ್ಲ, ರಾತ್ರಿ ವೇಳೆ ಒಬ್ರೇ ಬರಂಗಿಲ್ಲ. ಅದ್ರಲ್ಲೂ ಮಕ್ಕಳು ಕಂಡ್ರೆ ಸಾಕು ಬೀದಿ ನಾಯಿಗಳು ಎಗರಿ ಬೀಳುತ್ತವೆ . ಇನ್ನೂ ತುಮಕೂರು ಜಿಲ್ಲೆಯಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮನೆ ಮುಂದೆ ಆಟವಾಡುತ್ತಿರುವಾಗ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ನಾಯಿಗಳು ದಾಳಿ ಮಾಡಿರುವ ಘಟನೆ ತುಮಕೂರು ತಾಲೂಕಿನ ಹೆಗ್ಗೆರೆಯಲ್ಲಿ ನಡೆದಿದೆ.
ಹಲೀಜಾ ಖಾನಂ ಗಾಯಗೊಂಡ ಬಾಲಕಿಯಾಗಿದ್ದು, ಬಾಲಕಿಗೆ ಕಣ್ಣು ಹಾಗೂ ತಲೆಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಬಾಲಕಿಯ ಎಡಗಣ್ಣಿಗೆ ಗಂಭೀರ ಹಾನಿಯಾಗಿದ್ದು, ಬಾಲಕಿಗೆ ತುಮಕೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿನಾಯಿಗಳ ಹಾವಳಿಯಿಂದ ಹೆಗ್ಗೆರೆ ಗ್ರಾಮಸ್ಥರು ರೋಸಿ ಹೋಗಿದ್ದಾರೆ.
ಶಾಲೆಗೆ ಹೋಗುವಾಗ ಬರುವಾಗ ಹಾಗೂ ಮನೆ ಮುಂದೆ ಆಟವಾಡುವಾಗ ಬೀದಿ ನಾಯಿಗಳ ಹಿಂಡು ದಾಳಿ ಮಾಡುತ್ತಿವೆ. ಹೀಗಾಗಿ ಬೀದಿನಾಯಿಗಳ ಸೆರೆಹಿಡಿಯುವಂತೆ ಹಲವು ಬಾರಿ ಹೆಗ್ಗೆರೆ ಗ್ರಾಪಂ ಮನವಿ ಮಾಡಿದರೂ ತಲೆಕೆಡೆಸಿಕೊಂಡಿಲ್ಲ ಎಂದು ಹೆಗ್ಗೆರೆ ಗ್ರಾ.ಪಂ ಹಾಗೂ ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.