ನಾಲ್ಕು ವರ್ಷದ ಪುಟ್ಟ ಹುಡುಗನ ಮೇಲೆರಗಿದ ಬೀದಿ ನಾಯಿ: ತಲೆಗೆ ಗಾಯ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಜನತೆ ಬೆಚ್ಚಿ ಬೀಳುವಂತಾಗಿದ್ದು, ಮಕ್ಕಳನ್ನು ಒಂಟಿಯಾಗಿ ಹೊರಬಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮುಂದೆ ಆಟ ಆಡುತ್ತಿರುವ ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ನಿತ್ಯವೂ ಒಂದಿಲ್ಲೊಂದು ಕಡೆ ನಾಯಿ ಕಡಿತದಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡುವ ಘಟನೆ ನಡೆಯುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರವಷ್ಟೇ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 4 ವರ್ಷದ ಮನೋಜ್ ಸೋಮಪ್ಪ ಬನ್ನಿ ಎಂಬ ಪುಟ್ಟ ಬಾಲಕನ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿದೆ.

Advertisement

ಬಾಲಕನ ತಲೆಯ ಭಾಗಕ್ಕೇ ಬಾಯಿ ಹಾಕಿದ ಸಂದರ್ಭದಲ್ಲಿ ಕಿರುಚಾಡಿದ ಬಾಲಕನನ್ನು ಕಂಡು ಸಾರ್ವಜನಿಕರು ನಾಯಿಯನ್ನು ಹೊಡೆದು ಓಡಿಸಿ ಬಾಲಕನ ರಕ್ಷಿಸಿದ್ದಾರೆ. ಕೂಡಲೇ ಪಾಲಕರು ಮಗುವಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

ಒಟ್ಟಿನಲ್ಲಿ ಪಟ್ಟಣದಲ್ಲಿ ಹಿಂಡು ನಾಯಿಗಳ ಮೃಗೀಯ ವರ್ತನೆಯಿಂದ ಪಾಲಕರು ಬೆಚ್ಚಿ ಬಿದ್ದಿದ್ದಾರೆ. ಮಕ್ಕಳನ್ನು ಶಾಲೆಗೆ, ಆಟಕ್ಕೆ ಬಿಡಲು ಹೆದರುತ್ತಿದ್ದಾರೆ. ಅಲ್ಲದೇ ಬೆಳಿಗ್ಗೆ ಹಾಲು, ಪೇಪರ್, ಹೂವು, ಹಣ್ಣು, ತರಕಾರಿ ಮಾರಾಟಗರರು ಎಡಗೈ ಮುಷ್ಟಿಯಲ್ಲಿ ಜೀವ ಹಿಡಿದು ಕಾರ್ಯ ನಿರ್ವಹಿಸುವ ಪರಿಸ್ಥಿತಿಯಿದೆ. ಸಂಚಾರದ ವೇಳೆ ಬೈಕ್ ಸವಾರರನ್ನು ಬೆನ್ನಟ್ಟುವ ನಾಯಿಗಳಿಂದ ಪಾರಾಗಲು ಹೋಗಿ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ವಾಯು ವಿಹಾರಿಗಳು, ಮಹಿಳೆಯರು, ಮಕ್ಕಳು, ವಯೋವೃದ್ಧರಲ್ಲಿಯೂ ನಾಯಿಗಳ ಭಯ ಕಾಡುತ್ತಿದೆ.

ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ಸೇರಿ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಸ್ಥಳೀಯ ಪುರಸಭೆ, ಗ್ರಾ.ಪಂನವರು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಅವುಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಈಗ ಇಡೀ ವಾತಾವರಣವನ್ನೆ ಹದಗೆಡಿಸಿದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಪುರಸಭೆಗೆ ಮನವಿ ಮಾಡಿದ್ದರೂ ಕಾಟಾಚಾರದ ಕ್ರಮ ಕೈಗೊಂಡು ಸುಮ್ಮನಾಗುತ್ತಾರೆ. ಪಟ್ಟಣದ ಜನರ, ಮಕ್ಕಳ ಜೀವದ ದೃಷ್ಟಿಯಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.


Spread the love

LEAVE A REPLY

Please enter your comment!
Please enter your name here