ಕೋಲಾರ: ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಇದೀಗ ಕಲಬೆರಕೆ ಹಾಲಿನ ದಂಧೆ ತಲೆದೋರಿದ್ದು ಆತಂಕಕ್ಕೆ ಕಾರಣವಾಗಿದೆ.
ಮುಳಬಾಗಿಲು, ಕೆಜಿಎಫ್ ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ಸುಮಾರು 32 ಸ್ಥಳಗಳಲ್ಲಿ ಕಲಬೆರಕೆ ಹಾಲು ಮಾರಾಟವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೆಜಿಎಫ್ನಲ್ಲಿ ಎಸ್ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ.
ಕಲಬೆರಕೆ ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಖಾಸಗಿ ಹಾಗೂ ಅನಧಿಕೃತ ಡೇರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.



