ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿಗೆ ಅನುಗುಣವಾಗಿ, ಸರಿಯಾದ ಸಮಯಕ್ಕೆ ಪ್ರಗತಿ ಸಾಧಿಸಬೇಕು. ಗುರಿಗೆ ಅನುಗುಣವಾಗಿ ಪ್ರಗತಿಗೆ ಶ್ರಮಿಸದ ಅಧಿಕಾರಿಗಳ ವಿರುದ್ಧ ಕಡ್ಡಾಯವಾಗಿ ಕಠಿಣ ಕ್ರಮ ತಗೆದುಕೊಳ್ಳಲಾಗುವುದು. ಹಾಗೆಯೇ ಪ್ರಗತಿಗೆ ಶ್ರಮಿಸುವ ಅಧಿಕಾರಿಗಳನ್ನು ಗೌರವಿಸುವ ಕೆಲಸವನ್ನೂ ಮಾಡಲಾಗುವುದು ಎಂದು ನೂತನ ಇಒ ಚಂದ್ರಶೇಖರ ಬಿ.ಕಂದಕೂರು ಸಂಬಂಧಿಸಿದ ತಾಲೂಕಿನ ಅಧಿಕಾರಿಗಳ ವಿರುದ್ಧ ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಾಟಿ ಬೀಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ನಡೆದ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ 13 ಗ್ರಾಮ ಪಂಚಾಯಿತಿಗಳ ಪಂಚಾಯತ ಅಧಿಕಾರಿಗಳು, ತಾಲೂಕು ನರೇಗಾ ಸಿಬ್ಬಂದಿ ವರ್ಗ, ಬಿಲ್ ಕಲೆಕ್ಟರ್‌ಗಳು, ಪಂಚಾಯತ ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್‌ಗಳು, ಬಿಎಫ್‌ಟಿಗಳು, ಗ್ರಾಮ ಕಾಯಕ ಮಿತ್ರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಕುಂಠಿತವಾಗಿದೆ. ಗಜೇಂದ್ರಗಡ ತಾಲೂಕು ಮುಂದಿನ ವಾರದಲ್ಲಿ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯಬೇಕು. ತಾಲೂಕಿನ ಎಲ್ಲ ಗ್ರಾ.ಪಂಗಳು ಶೇ.50ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಬೇಕು. ವಾರದೊಳಗೆ ಅತೀ ಹೆಚ್ಚು ತೆರಿಗೆ ವಸೂಲಾತಿ ಮಾಡುವ 5 ಗ್ರಾ.ಪಂಗಳ ಬಿಲ್ ಕಲೆಕ್ಟರ್‌ಗಳಿಗೆ ಚಾಂಪಿಯನ್ಸ್ ಆಫ್ ಟ್ಯಾಕ್ಸ್ ಕಲೆಕ್ಷನ್ ಎಂಬ ಹೆಸರಿನಡಿ ಪ್ರೋತ್ಸಾಹಕವಾಗಿ ಪ್ರಮಾಣ ಪತ್ರ ಮತ್ತು ಪಾರಿತೋಷಕ ನೀಡಿ ಗೌರವ ಸಲ್ಲಿಸಲಾಗುವುದು ಎಂದರು.
ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಯೋಜನೆಯಡಿ ಯಾವುದೇ ಕಾಮಗಾರಿಯನ್ನು ವಿಳಂಬ ಮಾಡದೇ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಒಪ್ಪಿಗೆ ನೀಡಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತೆ ನರೇಗಾ ಸಿಬ್ಬಂದಿ ಮುತುವರ್ಜಿ ವಹಿಸಬೇಕು. ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಕ್ರಿಯಾಯೋಜನೆಯ ಎಲ್ಲ ಕೆಲಸಗಳಿಗೆ ತಾಂತ್ರಿಕ ಸಿಬ್ಬಂದಿ ಅಂದಾಜು ಪತ್ರಿಕೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಸ್ವಚ್ಛ ಭಾರತ್ ಮಿಶನ್, ಮುಂದುವರೆದ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ಕಸದ ವಾಹನಗಳಿಗೆ ಮಹಿಳಾ ಡ್ರೈವರ್‌ಗಳ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸುವುದು ಸೇರಿದಂತೆ ಪ್ರಮುಖ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದರು.
ಸಭೆಯಲ್ಲಿ ತಾ.ಪಂ ಸಹಾಯಕ ನಿರ್ದೇಶಕ (ಉದ್ಯೋಗ ಖಾತರಿ) ಬಸವರಾಜ ಬಡಿಗೇರ್ ನೂತನ ಇಒ ಚಂದ್ರಶೇಖರ ಬಿ.ಕಂದಕೂರು ಅವರಿಗೆ ಸಾಥ್ ನೀಡಿದರು.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಇದಕ್ಕೆ ಪೂರಕವಾಗಿ ಪಿಡಿಒ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ವಿನಯದಿಂದ ವರ್ತಿಸಬೇಕು. ಈ ಮೂಲಕ ತಾಲೂಕಿನ ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಿ.
– ಚಂದ್ರಶೇಖರ ಬಿ.ಕಂದಕೂರು.
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ.