ಬೆಂಗಳೂರು:– ಕರ್ನಾಟಕದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ವಿವಿಧ ಬಗೆಯ ಗಣಪನ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.
ಅದರಂತೆ ಗಣೇಶನ ಕೂರಿಸಿ ಸಂಭ್ರಮಿಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಡಕ್ ನಿಯಮಗಳನ್ನ ಕೂಡ ಜಾರಿ ಮಾಡಿದೆ. ಅದ್ರಲ್ಲೂ ಪರಿಸರ ಸ್ನೇಹಿ ಗಣಪನ ಆಚರಣೆಗೆ ಕರೆ ಕೊಟ್ಟಿರುವ ಬಿಬಿಎಂಪಿ ನೀವು ಕೂರಿಸುವ ಗಣೇಶನನ್ನ ವಿಸರ್ಜನೆ ಮಾಡಿಸೋಕೆ ತಯಾರಾಗಿದೆ.
ಗಣೇಶ ಮೂರ್ತಿ ವಿಸರ್ಜನೆಗೆ ಎಲ್ಲೆಲ್ಲಿ ಅವಕಾಶ!?
ಗಣೇಶ ಮೂರ್ತಿ ವಿಸರ್ಜನೆಗಾಗಿ ಈಗಾಗಲೇ ಬಿಬಿಎಂಪಿ ಸಕಲ ತಯಾರಿ ಮಾಡಿಕೊಂಡಿದೆ. ಹೀಗಾಗಿ ಕೆರೆ, ಕಲ್ಯಾಣಿ, ಸಂಚಾರಿ ವಾಹನಗಳ ವ್ಯವಸ್ಥೆಯನ್ನ ಮಾಡಿಕೊಳ್ಳುತ್ತಿದೆ. ಯಡಿಯೂರು ಕೆರೆ ಅಂತೂ ಮದುವಣಗಿತ್ತಿ ಹಾಗೇ ಜಗಮಗಿಸುವ ಲೈಟ್ಸ್ಗಳಿಂದ ಅಲಂಕೃತಗೊಂಡಿದೆ. ಇನ್ನ ಸ್ಯಾಂಕಿ ಟ್ಯಾಂಕ್, ಹಲಸೂರು ಕೆರೆ ಸೇರಿದಂತೆ ಒಟ್ಟು 41 ಕೆರೆಗಳು ಹಾಗೂ ತಾತ್ಕಾಲಿಕ ಕಲ್ಯಾಣಿಗಳನ್ನ ಗಣೇಶನ ವಿಸರ್ಜನೆಗೆ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ.
ಇವತ್ತಿನಿಂದ ಸೆಪ್ಟೆಂಬರ್ 17ರವರೆಗೆ, ಸಾರ್ವಜನಿಕರು ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ತಯಾರಿಸಲಾದ ಗಣೇಶ ಮೂರ್ತಿಗಳನ್ನು ಇಲ್ಲಿ ವಿಸರ್ಜನೆ ಮಾಡಿಕೊಳ್ಳಬಹುದಾಗಿದೆ.