ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26ರಿಂದ ಮುಷ್ಕರ ನಡೆಸುವುದಾಗಿ ಶಿರಹಟ್ಟಿ ತಾಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಮಂಗಳವಾರ ತಹಸೀಲ್ದಾರ ಅನಿಲ ಬಡಿಗೇರ ಮೂಲಕ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ನಾಗರಾಜ ಚೋಳಮ್ಮನವರ, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17 ಮೊಬೈಲ್/ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಾವು-ನೋವುಗಳು ಸಂಭವಿಸುತ್ತಿದೆ ಎಂದು ಆರೋಪಿಸಿದರು.
ಪರಶುರಾಮ ತಳವಾರ, ಶರಣಬಸಪ್ಪ ಮೈನಾಳ, ಪ್ರವೀಣ ಬರಡಿ, ಚನ್ನವೀರಸ್ವಾಮಿ ಸಿದ್ದಾಂತಿಮಠ, ಬಿ.ಡಿ. ನಂದಗಾವಿ, ಸಿ.ಸಿ. ನಾಗನೂರ, ಶಂಭುಲಿಂಗಯ್ಯ ಹೆಬ್ಬಾಳಮಠ, ನಾಗಪ್ಪ ರಾಠೋಡ, ಪಿ.ಟಿ. ಬಾರಕೇರ, ಪಿ.ಬಿ. ಗೋರೆಖಾನ, ಲಕ್ಷ್ಮಣ ಲಮಾಣಿ, ಎಸ್.ಎಚ್. ಮುಲ್ಲಾ, ಬಿ.ಎಫ್. ಜಿನಗಿ, ಶೃತಿ ಮಡ್ಡಿ, ರಾಧಾ ದೇಸಾಯಿಪಟ್ಟಿ, ಸಿ.ಪಿ. ತಳಕೇರಿ ಉಪಸ್ಥಿತರಿದ್ದರು.
ಎಲ್ಲಾ ಮೊಬೈಲ್ ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿರುತ್ತದೆ. ಆದ್ದರಿಂದ ನಮ್ಮೆಲ್ಲ ಬೇಡಿಕೆಗಳು ಈಡೇರುವವರೆಗೆ ಸೆ.26ರಿಂದ ಎಲ್ಲಾ ಬಗೆಯ ಮೊಬೈಲ್ ಹಾಗೂ ವೆಬ್ ಅಪ್ಲಿಕೇಶನ್‌ನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಠಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುವುದು. ಸಮೂಹದ ಬೇಡಿಕೆಗಳನ್ನು ಈಡೇರಿಸಿ ಉತ್ತಮ ಮತ್ತು ಗುಣಮಟ್ಟದ ರೀತಿಯಲ್ಲಿ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮೂಲಕ ಆಗ್ರಹಿಸಿದರು.