ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ನಂತರ ನೇಮಕಗೊಂಡು ನಿವೃತ್ತಿ ನಂತರ ನೀಡುವ ಎನ್.ಪಿ.ಎಸ್. ಅಥವಾ ಓ.ಪಿ.ಎಸ್ ಪಿಂಚಣಿ ಯೋಜನೆಯು ಜಾರಿಯಲ್ಲಿ ಇರುವುದಿಲ್ಲ. ಹಾಗಾಗಿ ಅಂತವರ ಬದುಕು ಕಷ್ಟದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ನಿವೃತ್ತಿ ಹೊಂದಿರುವ ಹಾಗೂ ಹೊಂದಲಿರುವ ನೌಕರರು ನೆಮ್ಮದಿಯ ಬದುಕು ಸಾಗಿಸಲು ಮುಂಬರುವ ಸದನದಲ್ಲಿ ಪಿಂಚಣಿ ಯೋಜನೆ ಜಾರಿಗೆ ತರಲು ಒತ್ತಾಯಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಇತ್ತೀಚೆಗೆ ಶಾಲಾ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವ ಕನಕದಾಸ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ. ಟಿ.ಎನ್. ಗೋಡಿ, ಮತ್ತು ಪಂಚಾಕ್ಷರಿ ಗವಾಯಿಗಳ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್. ಯತ್ನಟ್ಟಿ, ಜೆ.ಎನ್. ಕಲಾ ಮಹಾವಿದ್ಯಾಲಯ ರೋಣದ ಉಪನ್ಯಾಸಕರುಗಳಾದ ಎಮ್.ಆರ್. ಹೆಬ್ಬಳ್ಳಿ, ಬಿ.ಎಸ್. ಮಾನೇದ, ವಿ.ಡಿ.ಎಸ್.ಟಿ.ಸಿ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲಾ ಶಿಕ್ಷಕರುಗಳಾದದ ಎಸ್.ಕೆ. ಹೊಸಮನಿ ಹಾಗೂ ಎಸ್.ಆರ್. ಕಲಘಟಗಿ ಇವರುಗಳಿಗೆ ಸಂಕನೂರ ಅಭಿಮಾನಿ ಬಳಗದ ವತಿಯಿಂದ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಮ್.ಸಿ. ಕಟ್ಟಿಮನಿ, ಪ್ರೊ. ಎಸ್.ಎಸ್. ಸೋಮಣ್ಣವರ ನಿವೃತ್ತಿ ಹೊಂದಿದ ಶಿಕ್ಷಕರ ಹಾಗೂ ಉಪನ್ಯಾಸಕರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಅಶೋಕ ಅಂಗಡಿ ಸ್ವಾಗತಿಸಿದರು. ಪ್ರೊ. ಶಶಿಧರ ಕುರಿ ವಂದಿಸಿದರು. ಸಮಾರಂಭದಲ್ಲಿ ಉಪನ್ಯಾಸಕರುಗಳಾದ ಈರಣ್ಣ ಹಾದಿಮನಿ, ಜಗದೀಶ ನರಗುಂದ ಸೇರಿದಂತೆ ಸಂಕನೂರ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.