ಬಳ್ಳಾರಿ: ರಾಜ್ಯದಲ್ಲಿ ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳಿಗೆ ಮತ್ತೊಂದು ಉದಾಹರಣೆ ಬಳ್ಳಾರಿ ಜಿಲ್ಲೆಯ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಬೆಳಕಿಗೆ ಬಂದಿದೆ. 9ನೇ ತರಗತಿ ವಿದ್ಯಾರ್ಥಿಯೊಬ್ಬನು ಸಹಪಾಠಿಗಳ ಮೇಲೆ ದಾಳಿ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾಳಿ ವೇಳೆ ಹಾಸ್ಟೆಲ್ ವಾರ್ಡನ್ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ನಂತರ ದಾಳಿ ನಡೆಸಿದ ವಿದ್ಯಾರ್ಥಿ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತ ವಿದ್ಯಾರ್ಥಿಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, “ಹಾಸ್ಟೆಲ್ ಆಡಳಿತದ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ. ನಮ್ಮ ಮಕ್ಕಳನ್ನು ನಂಬಿ ಇಲ್ಲಿ ಬಿಟ್ಟಿದ್ದೇವೆ. ಆದರೆ ವಿದ್ಯಾರ್ಥಿಯ ಕೈಗೆ ಮಾರಕಾಸ್ತ್ರ ಸಿಕ್ಕಿದ್ದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ದಾಳಿ ನಡೆಸಿದ ವಿದ್ಯಾರ್ಥಿಗೆ ಮಾನಸಿಕ ಸಮಸ್ಯೆಗಳಿತ್ತಾ ಅಥವಾ ಮಾದಕ ವಸ್ತುಗಳಿಗೆ ಅಡಿಕ್ಟ್ ಆಗಿದ್ದಾನೆಯೇ ಎಂಬುದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



