ಗದಗ: ಅಜ್ಜಿ ಸಾವಿನ ದುಃಖದಲ್ಲೂ ವಿದ್ಯಾರ್ಥಿನಿಯೊಬ್ಬಳು SSLC ಪರೀಕ್ಷೆ ಬರೆದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ.
ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಜಲಜಾಕ್ಷಿ ಕಿಲಾರಿ ಎಸ್ಎಸ್ಎಲ್ ಸಿ ಕನ್ನಡ ಪರೀಕ್ಷೆ ಬರೆದ ವಿದ್ಯಾರ್ಥಿನಿಯಾಗಿದ್ದು, ಎಸ್ ಎಸ್ ಎಲ್ ಸಿ ಕನ್ನಡ ವಿಷಯದ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಸಿದ್ದಳಾಗಿದ್ದಳು. ಆದ್ರೆ ವಿಧಿಯಾಟ ಬೇರೆಯಿತ್ತು. ಅಜ್ಜಿ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಇನ್ನೂ ದುಃಖದ ವಾತಾವರಣದಲ್ಲಿ ಪರೀಕ್ಷೆಗೆ ಬರಲು ಭಯದಲ್ಲಿದ್ದ ಜಲಜಾಕ್ಷಿಗೆ ಪಾಲಕರು ಹಾಗೂ ಶಾಲೆಯ ಶಿಕ್ಷಕರು ಮತ್ತು ಅವಳ ಸಹಪಾಠಿಗಳು ಧೈರ್ಯ ತುಂಬಿದ್ದಾರೆ.
ಇಂದು ಬೆಳಿಗ್ಗೆ ಮೃತ ಅಜ್ಜಿಗೆ ಪೂಜೆ ಸಲ್ಲಿಸಿ, ಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡು ಶಾಲೆಗೆ ಆಗಮಿಸಿ ಪರೀಕ್ಷೆ ಬರೆದಿದ್ದಾಳೆ.
ಶಿಕ್ಷಕಿಯರಾದ ಶ್ರೀಮತಿ ಎ ಬಿ ಬೇವಿನಕಟ್ಟಿ, ಸಂಜುತ ಸಂಕಣ್ಣವರ್, ಶ್ರೀಮತಿ ಎಸ್ ಎಂ ಹಂಚಿನಾಳ, ಬೂದಪ್ಪ ಅಂಗಡಿ, ಎಸ್ ಎಸ್ ತಿಮ್ಮಾಪುರ್, ಎಂ ಎಂ ಗೌಳೆರ ಸೇರಿದಂತೆ ಎಲ್ಲ ಶಿಕ್ಷಕರು ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಗೆ ಹೋಗಿ ದೈರ್ಯ ತುಂಬಿದ್ದಾರೆ.ಎದೆಯಲ್ಲಿ ದುಃಖ ತುಂಬಿಕೊಂಡು ಧೈರ್ಯದಿಂದ ಪರೀಕ್ಷೆ ಬರೆದಿದ್ದಾಳೆ.