ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತಾಲೂಕಿನ ಮೈನಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕುಮಾರ್ ಡಿ. ವರ್ಗಾವಣೆಗೊಂಡಿದ್ದಕ್ಕೆ ವಿದ್ಯಾರ್ಥಿಗಳೆಲ್ಲರೂ ಕಣ್ಣೀರು ಹಾಕಿದ್ದಾರೆ.
17 ವರ್ಷಗಳ ಕಾಲ ಮೈನಳ್ಳಿಯ ಶಾಲೆಯಲ್ಲಿಯೇ ಬೋಧನೆ ಮಾಡುತ್ತಿದ್ದ ಶಿಕ್ಷಕ ಕುಮಾರನನ್ನು ವಿದ್ಯಾರ್ಥಿಗಳೆಲ್ಲರೂ ಬಹಳಷ್ಟು ಹಚ್ಚಿಕೊಂಡಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಕುಮಾರ್, ಸ್ವಜಿಲ್ಲೆಯ ಶಿಕ್ಷಣ ಸಚಿವ ಮಧುಬಂಗಾರಪ್ಪನವರ ಸ್ವಕ್ಷೇತ್ರ ಸೊರಬದ ಕಲ್ಲಂಬಿ ಗ್ರಾಮದ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.
ಕುಟುಂಬಸ್ಥರೆಲ್ಲರೂ ಅದೇ ಜಿಲ್ಲೆಯವರಾಗಿದ್ದು, ಶಿಕ್ಷಕ ಕುಮಾರ್‌ಗೆ ಅನುಕೂಲ ಆಗಲಿದೆ.
ಬಿಳ್ಕೋಡುವಾಗ ಮಕ್ಕಳೆಲ್ಲರೂ ಶಿಕ್ಷಕ ಕುಮಾರನನ್ನು ಸುತ್ತುವರೆದು, ತಮ್ಮನ್ನು ಬಿಟ್ಟು ಹೋಗದಂತೆ ಕಣ್ಣೀರಾಕುತ್ತಿದ್ದರು. ಕೆಲವು ವಿದ್ಯಾರ್ಥಿಗಳು ಶಿಕ್ಷಕನ ಕಾಲಿಗೆ ಬಿದ್ದು, ಆಶೀರ್ವಾದ ಪಡೆದರು. ಇನ್ನು ಕೆಲವರು ಅಪ್ಪಿಕೊಂಡರು. ನೆಚ್ಚಿನ ಶಿಕ್ಷಕ ಶಾಲೆ ತೊರೆಯುತ್ತಿರುವುದನ್ನು ಅರಗಿಸಿಕೊಳ್ಳದ ವಿದ್ಯಾರ್ಥಿಗಳು ಕಂಬನಿ ಮಿಡಿದರು. ಶಿಕ್ಷಕ ಕುಮಾರ್ ಮತ್ತು ಶಾಲೆಯ ಪ್ರಾಚಾರ್ಯ ಶಂಭುಲಿಂಗನಗೌಡ್ರು ಹಲಗೇರಿ ಸೇರಿ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಲು ಹರಸಾಹಸ ಪಟ್ಟರು.
Advertisement