ಚಿಕ್ಕಮಗಳೂರು: ರಸ್ತೆಯಲ್ಲಿನ ಗುಂಡಿಗಳಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಪ್ರೌಢಶಾಲೆಯ ಮಕ್ಕಳೇ ಮುಂದಾಗಿ ಗುಂಡಿಗಳನ್ನು ಮುಚ್ಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ನಡೆದಿದೆ.

ಕರ್ಕೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಪಾಲ್ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ದಿನನಿತ್ಯ ಶಾಲೆಗೆ ತೆರಳುವ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಹಲವು ಬಾರಿ ದೂರು ನೀಡಿದರೂ ಆಡಳಿತದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಮಕ್ಕಳೆ ಸಿಮೆಂಟ್, ಮರಳು ಮತ್ತು ಜಲ್ಲಿಯನ್ನು ತಂದು ರಸ್ತೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಪ್ಯಾಚ್ ಕೆಲಸ ಮಾಡಿದ್ದಾರೆ.
ಮಕ್ಕಳ ಈ ಸಾಮಾಜಿಕ ಹೊಣೆಗಾರಿಕೆಗೆ ಗ್ರಾಮಸ್ಥರು ಹಾಗೂ ರಸ್ತೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಇದು ಮಕ್ಕಳ ಜವಾಬ್ದಾರಿ ಅಲ್ಲ, ಆದರೆ ಅವರು ಮಾಡಿರುವ ಕೆಲಸ ನಮಗೆ ಪಾಠ” ಎಂದು ಸಾರ್ವಜನಿಕರು ಹೇಳಿದ್ದಾರೆ.ಇದೇ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದ ಆಡಳಿತ ವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಮೂಲಭೂತ ಸೌಕರ್ಯ ಒದಗಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ದುಃಖಕರ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.



