ಚಿಕ್ಕಮಗಳೂರು: ರಾಜ್ಯದ ಅತ್ಯಂತ ಎತ್ತರದ ಪ್ರದೇಶವೆಂದು ಪರಿಗಣಿಸಲ್ಪಡುವ ಕಾಫಿನಾಡ ದತ್ತಪೀಠದ ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ನಾಪತ್ತೆಯಾದ ಬಾಲಕಿ ಶ್ರೀನಂದಾ ತಾಯಿ ರೋಹಿಣಿ ನೀಡಿದ ಹೇಳಿಕೆ, ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಿಸುವಂತಾಗಿದೆ.
ಮಗಳು ಆಕಸ್ಮಿಕವಾಗಿ ಜಾರಿಬಿದ್ದು ಕಾಣೆಯಾಗಿರುವ ಸಾಧ್ಯತೆ ಇಲ್ಲ. ಯಾರೋ ಮಾದಕ ದ್ರವ್ಯ ನೀಡಿ ಅಪಹರಿಸಿರುವ ಶಂಕೆ ಇದೆ ಎಂದು ತಾಯಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಪ್ರಕರಣದಲ್ಲಿ ಹೊಸ ಅನುಮಾನಗಳು ಮೂಡಿವೆ.
ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ, ಮಂಗಳವಾರ ಸಂಜೆ ಜಲಪಾತ ವೀಕ್ಷಣೆಗೆ ತೆರಳಿದ ವೇಳೆ ನಾಪತ್ತೆಯಾಗಿದ್ದಳು. 41 ಮಂದಿ ಕುಟುಂಬ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಚಿಕ್ಕಮಗಳೂರಿಗೆ ಬಂದಿದ್ದಳು. ನಾಪತ್ತೆಯಾಗುವ ಕೆಲವೇ ನಿಮಿಷಗಳ ಮೊದಲು ತಂದೆಯ ಮೊಬೈಲ್ನಲ್ಲಿ ಸಂತೋಷದಿಂದ ರೀಲ್ಸ್ ಮಾಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ನಂತರ ತಕ್ಷಣವೇ ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮರೋಪಾದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ನೂರಾರು ಸಿಬ್ಬಂದಿ ಸೊಂಟಕ್ಕೆ ಹಗ್ಗ ಕಟ್ಟಿ ಸುಮಾರು 300 ಅಡಿ ಆಳಕ್ಕೆ ಇಳಿದು ಬಾಲಕಿಯ ಶೋಧ ನಡೆಸುತ್ತಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದರ ಮಧ್ಯೆ, ಶೋಧ ಕಾರ್ಯದ ವೇಳೆ ಕಾಡಿನೊಳಗೆ 28 ಮಂದಿ ಪ್ರವಾಸಿಗರ ತಂಡ ಮಕ್ಕಳ ಸಮೇತ ಕಾನೂನು ಬಾಹಿರವಾಗಿ ಚಾರಣ ನಡೆಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಸಿಬ್ಬಂದಿ ಅವರಿಗೆ ಎಚ್ಚರಿಕೆ ನೀಡಿ ಹಿಂದಕ್ಕೆ ಕಳುಹಿಸಿದ್ದಾರೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದು, ಬಾಲಕಿಯ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ.



