ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಂದಿನ ವಿದ್ಯಾರ್ಥಿಗಳು, ಯುವಕರು ಮೊಬೈಲ್‌ನಲ್ಲಿ ಹೆಚ್ಚಾಗಿ ಆಟ ಆಡುತ್ತಿದ್ದು, ಇದನ್ನು ನಿಲ್ಲಿಸಿ ಮೈದಾನದಲ್ಲಿ ಆಟವಾಡಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದು ಕೇಂದ್ರ ಸರಕಾರದ ಆಹಾರ ನಿಗಮದ ರಾಜ್ಯ ಸದಸ್ಯ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವೀಂದ್ರನಾಥ ದಂಡಿನ ಹೇಳಿದರು.
ಇಲ್ಲಿಯ ಬಿ.ಎಚ್. ಪಾಟೀಲ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಗ್ರಾಮೀಣ ವಲಯ ಗದಗ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಸ್ವಾಮಿ ವಿವೇಕಾನಂದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಲಕ್ಕುಂಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ಹೊರಬರಬೇಕು. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಕೌಶಲ್ಯವಂತರಾದರೆ ತಮ್ಮ ಭವಿಷ್ಯವೂ ಉಜ್ವಲವಾಗುತ್ತದೆ. ನಮ್ಮ ದೇಶ ಇಡೀ ಜಗತ್ತಿಗೆ ಯೋಗದ ಆಟವನ್ನು ಕೊಡುಗೆಯಾಗಿ ನೀಡಿದ್ದು, ಉತ್ತಮ ದೈಹಿಕ ಆರೋಗ್ಯದಿಂದ ಉತ್ತಮ ಮನಸ್ಸು ಸಹ ನಿರ್ಮಾಣವಾಗುತ್ತದೆ ಎಂದರು.
ಕ್ರೀಡಾಕೂಟ ಉದ್ಘಾಟಿಸಿದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಇಂದು ಸಾವಿರಾರು ಮಾರ್ಗಗಳು ಇವೆ. ತಮ್ಮ ಕ್ರೀಡಾ ಸಾಧನೆಯ ಗುರಿಗಾಗಿ ಗ್ರಾಮ ಪಂಚಾಯಿತಿ ಸಹಾಯ-ಸಹಕಾರ ನೀಡುತ್ತದೆ ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಜನತಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಕುಂಬಾರ, ವೀರಯ್ಯ ಗಂಧದ, ರಾಮಣ್ಣ ಅಂಬಕ್ಕಿ, ಗ್ರಾ.ಪಂ ಸದಸ್ಯರಾದ ಬಸವರಾಜ ಹಟ್ಟಿ, ಲಕ್ಷ್ಮಣ ಗುಡಸಲಮನಿ, ಮಹಾಂತೇಶ ಕಮತರ, ವಿರೂಪಾಕ್ಷ ಬೆಟಗೇರಿ, ಬಸವರಾಜ ಬಿಂಗಿ, ಎಸ್.ಆರ್. ಬಂಡಿ, ಎ.ಎನ್. ಪೂಜಾರ, ಕೆ.ಟಿ. ಮೀರಾನಾಯಕ, ಕೆ.ಬಿ. ಕೊಣ್ಣೂರು, ಎನ್.ಎಚ್. ಪಾಟೀಲ, ಅಶೋಕ ಬೂದಿಹಾಳ, ಉಪಸ್ಥಿತರಿದ್ದರು.
ಲಕ್ಕುಂಡಿಯ ಎಂ.ಕೆ.ಬಿ.ಎಸ್, ಸ್ವಾಮಿ ವಿವೇಕಾನಂದ ಶಾಲೆ, ಕೆ.ಜಿ.ಎಸ್, ಡಿ.ಪಿ.ಇ.ಪಿ ಶಾಲೆ, ಸರಕಾರಿ ಉರ್ದು ಶಾಲೆ, ರಾಣಿ ಚನ್ನಮ್ಮ ವಸತಿ ಶಾಲೆ, ಪ್ರಾಥಮಿಕ ಶಾಲೆ ಹರ್ಲಾಪೂರ, ಸರಕಾರಿ ಶಾಲೆ ತಿಮ್ಮಾಪೂರ, ಉದಯ ಪ್ರಾಥಮಿಕ ಶಾಲೆ ತಿಮ್ಮಾಪೂರ ಗ್ರಾಮದ ಕ್ರೀಡಾಪಟುಗಳು ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯ ಎಂ.ಎಸ್. ಬೇಲೇರಿ ಸ್ವಾಗತಿಸಿದರು. ವೈ.ಸಿ. ಕದಡಿ ನಿರೂಪಿಸಿದರು. ಜಿ.ವೈ. ದಾಸರ ವಂದಿಸಿದರು.
ನಿವೃತ್ತ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿಯ ಎಲೆ ಮರೆಯ ಕಾಯಿಯಂತೆ ಇರುವ ಕ್ರೀಡಾಪಟುಗಳು ಬೆಳೆಯಲು ಇದು ಉತ್ತಮ ವೇದಿಕೆಯಾಗಿದ್ದು, ಇಲ್ಲಿಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡುವಂತಾಗಬೇಕು ಎಂದು ಆಶಿಸಿದರು.