ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಶಾಲೆಯ ಮಧ್ಯಾಹ್ನ ಬಿಸಿಯೂಟ ಸೇವಿಸಿದ ಬಳಿಕ 22 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ. ಮುಂಡಗೋಡ ಪಟ್ಟಣದ ಮಾದರಿ ಶಾಲೆಯ ವಿದ್ಯಾರ್ಥಿಗಳು ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶಾಲೆಯ ಬಿಸಿಯೂಟದಲ್ಲಿ ಇಲಿಯ ಹಿಕ್ಕೆ ಕಂಡುಬಂದ ಕಾರಣ ಊಟ ಸೇವಿಸಿದ ಸುಮಾರು 400 ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳಿಗೆ ವಾಂತಿ ಮತ್ತು ಹೊಟ್ಟೆನೋವಿನ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣವೇ ಅಸ್ವಸ್ಥರಾದ 22 ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪಿಐ ರಂಗನಾಥ್ ಸೇರಿದಂತೆ ಹಲವಾರು ಅಧಿಕಾರಿಗಳು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಆಸ್ಪತ್ರೆಯ ವೈದ್ಯರ ತಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಒಂದು ದಿನ ನಿಗಾದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.



