ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆಗಳು ಮಕ್ಕಳಲ್ಲಿ ಮನೋಸ್ಥೈರ್ಯವನ್ನು ಮೂಡಿಸುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಸಾಧನೆಯ ಹಾದಿಯಲ್ಲಿ ಸಾಗಬೇಕು. ತಮ್ಮ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಜೀವನ ಮೌಲ್ಯಗಳನ್ನು ತಿಳಿದು ಮೌಲ್ಯಾಧಾರಿತ ಬದುಕು ತಮ್ಮದಾಗಿಸಿಕೊಳ್ಳಬೇಕೆಂದು ಕವಿತಾ ಬೇಲೇರಿ ಹೇಳಿದರು.
ಅವರು ಬೆಟಗೇರಿಯ ಕುರಹಟ್ಟಿಪೇಟೆಯ ಸರ್ಕಾರಿ ಉರ್ದು ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂ.1 ರಲ್ಲಿ ಜರುಗಿದ `ಮೌಲ್ಯ ಶಿಕ್ಷಣ’ ಕುರಿತು ತಿಳುವಳಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶಾಲಾ ಮಕ್ಕಳಿಗೆ ಇಲಾಖೆ ಕೊಡಮಾಡುವ ಶೂ-ಸಾಕ್ಸ್ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರೊಂದಿಗೆ ಆತ್ಮೀಯ ಸಂಬಂಧ ಹೊಂದಿರಬೇಕು. ಹಿರಿಯರ ಬುದ್ಧಿ ಮಾತುಗಳನ್ನು ಕೇಳಿ ತಿಳಿದುಕೊಳ್ಳಬೇಕು. ಕಲಿತ ಶಾಲೆಗೂ, ಹೆತ್ತವರಿಗೂ ಕೀರ್ತಿ ತರಬೇಕು. ಸಮಾಜವು ಗುರುತಿಸಿ ಗೌರವಿಸುವಂತಾಗಬೇಕು. ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಜ್ಞಾನದ ವಿಕಾಸ ಆಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಅಪ್ಸಾನಾ ಈಟಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅನೇಕ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಕಲಿಕೆ ಇಲ್ಲಿ ಕಂಡುಬರುತ್ತದೆ. ನಾವೆಲ್ಲರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯೆ ಎಸ್.ಎಂ. ಹುಲ್ಲೂರ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಿದೆ. ಮಕ್ಕಳು ಇಲ್ಲಿ ಸಿಗುವ ಸೌಲಭ್ಯದೊಂದಿಗೆ ಓದು-ಬರಹದಲ್ಲಿ ಯಶಸ್ಸು ಪಡೆಯಬೇಕು. ಸರ್ಕಾರಿ ಶಾಲೆಗಳು ಮಕ್ಕಳ ಅಭಿವೃದ್ಧಿಯ ಕೇಂದ್ರಗಳಾಗಿವೆ ಎಂದರು.
ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾರ್ಥಿಸಿದರು. ಶಿಕ್ಷಕ ಎಂ.ಎಚ್. ಲಕ್ಮಾಪೂರ ಸ್ವಾಗತಿಸಿದರು. ಎಂ.ಎಫ್. ನಾಯಕ್ ನಿರೂಪಿಸಿ ವಂದಿಸಿದರು.