ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ನಿರಂತರ ಓದಿ ಮನನ ಮಾಡಿಕೊಳ್ಳಬೇಕು. ಎಸ್.ಎಸ್.ಎಲ್.ಸಿಯು ವಿದ್ಯಾರ್ಥಿಗಳ ಬದುಕಿನ ಮಹತ್ವದ ಘಟ್ಟ. ಮುಂದಿನ ವಿದ್ಯಾಬ್ಯಾಸಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಈ ಹಂತದಲ್ಲಿ ವಿದ್ಯಾರ್ಥಿಗಳು ಏಕ ಚಿತ್ತದಿಂದ ಶಿಕ್ಷಕರ ಭೋಧನೆಯನ್ನು ಅರ್ಥೈಸಿಕೊಂಡು, ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಬೇಕೆಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಅವರು ಮಂಗಳವಾರ ಗದಗ ತಾಲೂಕಿನ ಕೋಟುಮಚಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಮೊದಲ 5 ಸ್ಥಾನ ಪಡೆದ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರೌಢಶಾಲಾ ಹಂತವು ಮಕ್ಕಳಲ್ಲಿ ವಿಚಾರಣಾತ್ಮಕ ಮನೋಭಾವನೆಗಳನ್ನು ಕ್ರೋಢೀಕರಿಸುತ್ತದೆ. ಅದಕ್ಕಾಗಿ ಪ್ರತಿಯೊಂದು ವಿಷಯವಾರು ಅಭ್ಯಾಸವನ್ನು ತಿಳಿದು ಅರ್ಥೈಸಿಕೊಳ್ಳಬೇಕು. ನಸುಕಿನಲ್ಲಿ ಓದುವ ರೂಢಿ ಒಳ್ಳೆಯದು. ಬರೆಯುವ ರೂಢಿಯನ್ನು ಹೆಚ್ಚು ಮಾಡಬೇಕು ಎಂದರು.
ಪಾರಿತೋಷಕ ವಿತರಕರಾಗಿ ಆಗಮಿಸಿದ್ದ ಗದುಗಿನ ಜರ್ಮನ್ ಆಸ್ಪತ್ರೆಯ ವೈದ್ಯ ಡಾ. ಅಜಯರಾಜ್ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ಟಿ.ವಿ ಗೀಳಿನಿಂದ ದೂರವಿರಬೇಕು. ದುಶ್ಚಟಗಳು ಮಕ್ಕಳನ್ನು ಅಪಾಯಕ್ಕೆ ತಳ್ಳುತ್ತವೆ. ಉತ್ತಮ ಸಹವಾಸ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಒಡನಾಟ, ಉತ್ತಮ ಪುಸ್ತಕಗಳ ಓದು, ಸರಿಯಾದ ಆರೋಗ್ಯ ಕ್ರಮ ಅನುಸರಿಸಿದರೆ ವಿದ್ಯಾರ್ಥಿಗಳ ಓದು ಯಶಸ್ಸು ಆಗುವುದು. ಸಾಧಕರು ಎಲ್ಲಿದ್ದರೂ ಸನ್ಮಾನಿತರೇ. ಇಂದು ಪ್ರತಿಭಾನ್ವಿತ ಮಕ್ಕಳಿಗೆ ಅವರಿರುವ ಜಾಗಕ್ಕೆ ಬಂದು ಅಣ್ಣಿಗೇರಿ ಗುರುಗಳ ಪ್ರತಿಷ್ಠಾನದಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಮಕ್ಕಳು ಇವರನ್ನು ಮಾದರಿಯಾಗಿ ಇಟ್ಟುಕೊಂಡು ವಿದ್ಯಾಭ್ಯಾಸಗೈಯ್ಯಬೇಕೆಂದರು.
ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿನಾಯಕ ಬಂಡಾ ವಹಿಸಿದ್ದರು. ಬಸಮ್ಮ ಗಾಣಿಗೇರ ಪ್ರಾರ್ಥಿಸಿದರು, ಎಂ.ಎ. ಹಿರೇಗೌಡ್ರ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಜಿ. ಕಟಗೇರಿ ನಿರೂಪಿಸಿದರು. ಕಾರ್ಯದರ್ಶಿ ಸುಭಾಸ್ ಬೆಟದೂರ ವಂದಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಗದಗ ತಾಲೂಕಿನ ಕೋಟುಮಚಗಿಯ ಸರ್ಕಾರಿ ಪ್ರೌಢಶಾಲೆಯ ವಿಜಯಲಕ್ಷ್ಮೀ ಶಿಂಗ್ಟಾಲಕೇರಿ, ಐಶ್ವರ್ಯ ಹುಡೇದ, ಯಲ್ಲಮ್ಮ ಶಿಂಗಟಾಲಕೇರಿ, ಯಾಸ್ಮೀನಬಾನು ತಿನಕಾಶಿ, ದೀಪಾ ಹಕ್ಕಿ, ನೀರಲಗಿಯ ಸರ್ಕಾರಿ ಪ್ರೌಢಶಾಲೆಯ ತೇಜಸ್ವಿನಿ ಭಿಂಗಿ, ಭೂಮಿಕಾ ವೈಷ್ಣವಿ, ಪ್ರಶಾಂತ ಸಂದಿಗೋಡ, ವಿದ್ಯಾ ಮೇಗಲಮನಿ, ಭರಮವ್ವ ಹಡಗಲಿ, ದೀಪಿಕಾ ಪಾಟೀಲ, ಕಣಗಿನಹಾಳದ ಸರ್ಕಾರಿ ಪ್ರೌಢಶಾಲೆಯ ಸುನಿಯಾ ನದಾಫ್, ಪ್ರಶಾಂತ ಮಲ್ಕಶೆಟ್ಟಿ, ಕುಶಲ ಭಾವಿ, ಅಂಜಲಿ ಬೆನಕೊಪ್ಪ, ಭೂಮಿಕಾ ಗುರುವಡೆಯರ, ಕಣಗಿನಹಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗೋಪಾಲ ಲಮಾಣಿ, ಮಹೇಶ ಲಮಾಣಿ, ಬೀರಪ್ಪ ಹುಲಿ, ಸೃಷ್ಟಿ ಕೊಂಚಿಗೇರಿ, ಶ್ರೀಕಾಂತ ಲಮಾಣಿ ಮುಂತಾದವರನ್ನು ಸನ್ಮಾನಿಸಲಾಯಿತು.