ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಎಬಿವಿಪಿ ಕಾರ್ಯಕರ್ತರೊಡಗೂಡಿ ವಿದ್ಯಾರ್ಥಿಗಳು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರದಿಂದ ಗದಗ ಸೇರಿ ಇತರೆಡೆ ಶಾಲಾ-ಕಾಲೇಜುಗಳಿಗೆ ತೆರಳಲು ದಿನನಿತ್ಯವೂ ಬಸ್ಸಿಗಾಗಿ ಗಂಟೆಗಟ್ಟಲೇ ಕಾಯುವ ಶಿಕ್ಷೆ ತಪ್ಪದಂತಾಗಿದೆ. ಸರಿಯಾದ ಸಮಯಕ್ಕೆ ಬಸ್ಸುಗಳು ಬಾರದ್ದರಿಂದ ವಿದ್ಯಾರ್ಥಿಗಳು ತರಗತಿಯಿಂದ ಹೊರಗುಳಿಯಬೇಕಾಗುತ್ತಿದೆ. ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಬಗ್ಗೆ ಹೋರಾಟ, ಪ್ರತಿಭಟನೆ ಮಾಡಿದ್ದಾಗಿದೆ. ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿದ್ದೂ ಆಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ-ಕಾಲೇಜು ಅವಧಿಯಲ್ಲಿ ಸಕಾಲಕ್ಕೆ ಬಸ್ ಬಿಡದಿದ್ದರೆ ವಿದ್ಯಾರ್ಥಿಗಳು ಏನು ಮಾಡಬೇಕು ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ನಿಯಂತ್ರಣಾಧಿಕಾರಿಗಳೊಂದಿಗೆ ಚರ್ಚಿಸಿ ಬಸ್ಸಿನ ವ್ಯವಸ್ಥೆ ಮಾಡಿದರು. ಇದೇ ಸಂದರ್ಭದಲ್ಲಿ ಬೇರೆ ಡಿಪೋ ಸಾರಿಗೆ ಸಿಬ್ಬಂದಿಯೋರ್ವ ವಿದ್ಯಾರ್ಥಿಯ ಬಸ್‌ಪಾಸ್ ಕಸಿದುಕೊಂಡು ವಿದ್ಯಾರ್ಥಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದಾಗ ಇದನ್ನು ಖಂಡಿಸಿದ ವಿದ್ಯಾರ್ಥಿಗಳು ಹದ್ದುಮೀರಿ ವರ್ತಿಸಿದ ಸಾರಿಗೆ ಸಿಬ್ಬಂದಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಎಬಿವಿಪಿ ತಾಲೂಕಾ ಸಂಚಾಲಕ ಪ್ರಕಾಶ ಕುಂಬಾರ, ನಗರ ಕಾರ್ಯದರ್ಶಿ ಅಭಿಷೇಕ ಉಮಚಗಿ, ವಿನಾಯಕ ಕುಂಬಾರ, ವಿನಾಯಕ ಸಪಡ್ಲದ, ಅಭಿಷೇಕ ಈಶನಗೌಡ್ರ, ವೀರೇಶ ಕುಂಬಾರ, ಕಾರ್ತಿಕ ಹುನಗುಂದ, ಅರವಿಂದ ಇಚ್ಚಂಗಿ, ಹಾಲಪ್ಪ ಜೋಗಿ, ಶರಣಪ್ಪ ಪಾಟೀಲ್, ಸತೀಶ ತಳವಾರ, ಆನಂದ ಬಡಿಗೇರ, ಈರಣ್ಣ ಬಡಿಗೇರ, ಹಾಲೇಶ ಪಾಟೀಲ, ಸಂಜನಾ ಪಾಟೀಲ, ಅನು ಅಣ್ಣಿಗೇರಿ, ಸವಿತಾ ಕರೆಯುತ್ತಿನ, ರಕ್ಷಿತಾ, ತೇಜು ಕುಂಬಾರ, ಸಂಗೀತಾ ನಂದಿಹಳ್ಳಿ, ವಿಜಯಲಕ್ಷ್ಮಿ ಕರೆಯುತ್ತಿನ, ಕೀರ್ತಿ ಮ್ಯಾಗೇರಿ, ತೇಜು ಕ್ಷತ್ರಿ ಮುಂತಾದವರಿದ್ದರು.



