ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸಮರ್ಪಕ ಬಸ್ ಸೌಕರ್ಯಕ್ಕೆ ಆಗ್ರಹಿಸಿ ಎಬಿವಿಪಿ ವತಿಯಿಂದ ನೂರಾರು ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಡಿಪೋ ಮ್ಯಾನೇಜರ್ ಮುಖಾಂತರ ಗದಗ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿದ್ದರೂ ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿಯ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗೆ ತೆರಳಲು ಆಗುತ್ತಿಲ್ಲ. ಇದರಿಂದ ಬಹುತೇಕರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಶಿರಹಟ್ಟಿ-ಗದಗ ನಡುವೆ ಸಮರ್ಪಕವಾಗಿ ಬಸ್ ಬಿಡಬೇಕು. ಲಕ್ಮೇಶ್ವರದಿಂದ ಗೊಜನೂರ, ಮಾಗಡಿ, ಹೊಳಲಾಪೂರ, ಪರಸಾಪೂರ ಮಾರ್ಗವಾಗಿ ಶಿರಹಟ್ಟಿಗೆ ಹಾಗೂ ಮುಳಗುಂದ, ಬಸಾಪೂರ, ಖಾನಾಪೂರ ಮಾರ್ಗವಾಗಿ ಶಿರಹಟ್ಟಿಗೆ ಬೆಳಿಗ್ಗೆ 6 ಗಂಟೆಗೆ ಬಸ್ ಬಿಡಬೇಕು ಎಂದು ಆಗ್ರಹಿಸಿದರು.
ಬಸ್ ಅವ್ಯವಸ್ಥೆಯಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆ 11.30ರ ಸುಮಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್‌ಗಳನ್ನು ತಡೆದು, ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ನಂತರ ಘಟನಾ ಸ್ಥಳಕ್ಕೆ ಸಿಪಿಐ ನಾಗರಾಜ ಮಾಢಳ್ಳಿ ಮತ್ತು ಪಿಎಸ್‌ಐ ಚನ್ನಯ್ಯ ಬೇವೂರ ಮತ್ತು ಪೊಲೀಸ್ ಸಿಬ್ಬಂದಿಗಳೊಂದಿಗೆ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಿ ಅವರ ಸಮಸ್ಯೆಗಳನ್ನು ಆಲಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಡಿಪೋ ಮ್ಯಾನೇಜರ್‌ಗೆ ಸೂಚನೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಮನವಿ ಸಲ್ಲಿಸಿದರು.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ ಬಾರ್ಕಿ, ಪರಶುರಾಮ ಕಳ್ಳಿಮನಿ, ಅಭಿಷೇಕ ಬೋರಶೆಟ್ಟರ, ಕಿರಣ ಮಜ್ಜಿಗೌಡ, ದಾನೇಶ ನವೀನ, ರವಿ ಕಪ್ಪತ್ತನವರ ಮುಂತಾದವರು ಉಪಸ್ಥಿತರಿದ್ದರು.