HomeGadag Newsವಿದ್ಯಾರ್ಥಿಗಳು ಪ್ರಜ್ಞಾವಂತರೂ ಆಗಬೇಕು : ಸಂಗಮೇಶ್ವರ ಸ್ವಾಮಿಗಳು

ವಿದ್ಯಾರ್ಥಿಗಳು ಪ್ರಜ್ಞಾವಂತರೂ ಆಗಬೇಕು : ಸಂಗಮೇಶ್ವರ ಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಂದು ವಿದ್ಯಾರ್ಥಿಗಳು ಹೆಚ್ಚು ವಿದ್ಯಾವಂತರಾಗಿರುವದನ್ನು ಗಮನಿಸಿದರೆ ಹೆಮ್ಮೆಯೆಮಿಸುತ್ತದೆ. ಆದರೆ ಅವರು ಮಾಡುವ ಕಾರ್ಯ-ಚಟುವಟಿಕೆಗಳನ್ನು ನೋಡಿ ವಿಷಾದವೂ ಆಗುತ್ತದೆ. ಕಾರಣ ಅವರಲ್ಲಿ ಪ್ರಜ್ಞಾಭಾವ ಇಲ್ಲದಿರುವುದು. ಇತ್ತೀಚೆಗಂತೂ ವಿದ್ಯಾರ್ಥಿಗಳಲ್ಲಿ ಕರ್ತವ್ಯ ಪ್ರಜ್ಞೆ, ಸಮಯ ಪ್ರಜ್ಞೆ, ಅಧ್ಯಯನ ಪ್ರಜ್ಞೆಗಳು ಮಾಯವಾಗುತ್ತಲಿವೆ. ಅಹಿಕತರ ಘಟನೆಗಳು ನಡೆಯಬಾರದೆಂದರೆ ವಿದ್ಯಾರ್ಥಿಗಳಲ್ಲಿ ಪ್ರಜ್ಞಾಭಾವ ಇರಬೇಕು. ಅವರಲ್ಲಿ ತಿಳುವಳಿಕೆ ಹೆಚ್ಚಾದರೆ ಉತ್ತಮ ಕಾರ್ಯಚಟುವಟಿಕೆಗಳಲ್ಲಿ ತೊಡಗುವರು. ಆದ್ದರಿಂದ ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಂಗಮೇಶ್ವರ ಸ್ವಾಮಿಗಳು ತಿಳಿಸಿದರು.

ಇಲ್ಲಿನ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಗದಗ ಮತ್ತು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2024 ಇವರುಗಳ ಸಹಯೋಗದಲ್ಲಿ ಬೇಸಿಗೆ ರಜೆ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸವ ಪ್ರಭೆ ಕ್ಯಾಂಪಸ್) ಆವರಣದಲ್ಲಿ ನಡೆದ 19ನೇ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿರಿಯರಾದ ನಾವು ಮಕ್ಕಳಿಗೆ ದಿನ ನಿತ್ಯದ ಉಡುಗೆ-ತೊಡುಗೆ, ಆಹಾರ-ವಿಹಾರ, ಆಚಾರ-ವಿಚಾರಗಳನ್ನು ರೂಢಿಸಬೇಕು. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಸಂಸ್ಕೃತಿ-ಸಂಸ್ಕಾರ ಶಿಬಿರ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.

ಸಮಾರಂಭದ ಸಮ್ಮುಖವನ್ನು ಪೂಜ್ಯಶ್ರೀ ಚಂದ್ರಶೇಖರ ಹರ್ಲಾಪೂರ ದೇವರು ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರು, ಸಂಗೀತ ಶಿಕ್ಷಕಿ ಸುನಂದಾ ಜ್ಯಾನೋಪಂತರ, ಸಂಸ್ಕೃತಿ-ಸಂಸ್ಕಾರ ಶಿಬಿರ ಸಂಯೋಜಕ ಮತ್ತು ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ. ಎಸ್. ಪಲ್ಲೇದ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರ‍್ನಿಕಾ ಪಾಟೀಲ ಗುರು ಶ್ಲೋಕ ಹೇಳಿದರು. ನೈಋಕ್ತ ರಡ್ಡಿ, ವೈನವಿ ಪಾಟೀಲ, ನಿಧಿ ಕಟ್ಟಿಮನಿ, ರಿತಿಕಾ ಹೊಸಮನಿ ವಚನ ಗೀತೆ ಹೇಳಿದರು. ನಿಧಿ ಗಿಡ್ಡಕೆಂಚಣ್ಣವರ, ಚಿನ್ಮಯ ಗೌಡರ ಶಿಬಿರ ಬಗ್ಗೆ ಅನಿಸಿಕೆ ತಿಳಿಸಿದರು. ಆದಿಶೇಷ ಜಾಧವ್, ಪ್ರಶಾಂತ ಲಕ್ಕುಂಡಿ, ಮನೋಜ ಸಾಲಗುಂದಿ, ಶ್ರಾವಣಿ ಗುಡಗೂರ ಮತ್ತು ಸಂಗಡಿಗರು ಯೋಗಾಸನ ಪ್ರದರ್ಶಿಸಿದರು. ಶಿಬಿರಾರ್ಥಿಗಳಿಗೆಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಶಿಬಿರ ಶಿಕ್ಷಕಿ ಸುನಂದಾ ಜ್ಯಾನೋಪಂತರ ಪ್ರಾರ್ಥನೆ ಹೇಳಿದರು. ಹೊಂಬಳ ಸರಕಾರಿ ಪದವಿಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹನಮಂತಗೌಡ ಗೌಡರ ಸ್ವಾಗತಿಸಿದರು. ಶಿಬಿರ ಶಿಕ್ಷಕ ಚೇತನ ಚುಂಚಾ ಪ್ರಾಸ್ತಾವಿಕ ನುಡಿ ತಿಳಿಸಿದರು. ಸಮಾಜ ಸೇವಾಸಕ್ತ ವಿ.ಎಂ. ಮುಂದಿನಮನಿ ಯಶಸ್ಸಿಗೆ ಸಹಕರಿಸಿದ, ದಾಸೋಹ ಸೇವೆ ಸಲ್ಲಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದರು. ಶಿಬಿರದ ಸಹ ಸಂಯೋಜಕ ಎಸ್.ಎಂ. ಬುರಡಿ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಶಿವಯ್ಯ ನಾಲತ್ವಾಡಮಠ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಯೋಗ ಪಾಠಶಾಲೆ ಸ್ಥಾಪಿಸಿ ಸರ್ವ ಜನತೆಗೆ ಆರೋಗ್ಯ ಭಾಗ್ಯ ಕರುಣಿಸಿದರೆ, ಶ್ರೀಮಠದ ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಯೋಗ ಪಾಠಶಾಲೆಯನ್ನು ಮಹಾವಿದ್ಯಾಲಯವನ್ನಾಗಿ ರೂಪಿಸುವ ಕೃಪಾಶೀರ್ವಾದ ನೀಡಿರುವುದು ಸೌಭಾಗ್ಯವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!