ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮಾಜದ ಓರೆಕೋರೆಗಳನ್ನು ತಿದ್ದುವ ಮಹತ್ವದ ಕೆಲಸವನ್ನು ಪತ್ರಿಕೆಗಳು ನಿರ್ವಹಿಸುತ್ತವೆ. ಇಂದಿಗೂ ಪತ್ರಿಕೆಗಳ ಪ್ರಾಸಂಗಿಕತೆ ಕಡಿಮೆಯಾಗಿಲ್ಲ. ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸುವುದು ಅವುಗಳ ಮಹತ್ವವನ್ನು ಅರಿಯಲು ನೆರವಾಗುತ್ತದೆ ಎಂದು ಉದ್ಯಮಿ ರಾಮಣ್ಣ ಕಮಾಜಿ ಹೇಳಿದರು.
ಪಟ್ಟಣದ ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಇ)ಯಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಪ್ರತಿದಿನವೂ ಪತ್ರಿಕೆ ಓದುವುದರಿಂದ ಜ್ಞಾನವೃದ್ಧಿಯಾಗುತ್ತದೆ. ಪ್ರಚಲಿತ ವಿದ್ಯಮಾನಗಳ ಅರಿವಿಗೆ ಪತ್ರಿಕೆಗಳ ಪಾತ್ರ ಅಪಾರವಾಗಿದೆ. ಈ ಡಿಜಿಟಲ್ ಯುಗದಲ್ಲೂ ಪತ್ರಿಕೆಗಳ ವಾಚನ ಅನುಭವಕ್ಕೆ ವಿಶೇಷ ಮೌಲ್ಯವಿದ್ದು, ಪತ್ರಿಕೆಗಳ ವಸ್ತುನಿಷ್ಠತೆ ಮತ್ತು ನಿಖರತೆ ಅನನ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಆರ್.ಎನ್. ದೇಶಪಾಂಡೆ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಂ. ಕಲ್ಲನಗೌಡರ, 1843 ಜುಲೈ 1ರಂದು ಆರಂಭವಾದ `ಮಂಗಳೂರು ಸಮಾಚಾರ’ ಕನ್ನಡದ ಮೊದಲ ಪತ್ರಿಕೆ. ಪತ್ರಿಕಾ ಸಾಹಿತ್ಯವನ್ನು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಗುರುತಿಸಬಹುದು. ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಪತ್ರಿಕೆಗಳು ನ್ಯಾಯ, ನೈತಿಕತೆ ಮತ್ತು ಜವಾಬ್ದಾರಿಯ ಪ್ರತೀಕವಾಗಿವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಮಾನೇಗಾರ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಐ.ಎಂ. ಶೇಖ್, ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಡಾ. ಎಸ್.ಸಿ. ಚವಡಿ, ಆರ್.ಎಂ. ಕಲ್ಲನಗೌಡರ, ಹೊನ್ನಪ್ಪ ನೀಲಗುಂದ, ವಿ.ಡಿ. ಕಣವಿ, ಎಂ.ಎ. ಜಮಾಲಸಾಬನವರ, ಭರತ ಕುರಣಿ, ಎಸ್.ಎಚ್. ಪೂಜಾರಿ, ನೂರಹ್ಮದ್ ನದಾಫ್, ವಿ.ಟಿ. ಅಂಗಡಿ, ಬಸವರಾಜ ಗೌರಿಮಣಿ, ಗೀತಾ ಪಾಟೀಲ, ಬಿ.ವಿ. ಸುಂಕಾಪೂರ ಹಾಗೂ ದತ್ತಣ್ಣ ಯಳವತ್ತಿ ಉಪಸ್ಥಿತರಿದ್ದರು.
ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ ಮಾತನಾಡಿ, ಇಂದಿನ ಪತ್ರಿಕೋದ್ಯಮವು ಹಲವು ಬಿಕ್ಕಟ್ಟಿನ ಮಧ್ಯೆ ಸಾಗುತ್ತಿದೆ. ರಾಜಕೀಯ ಮತ್ತು ಬಂಡವಾಳಶಾಹಿಯ ಒತ್ತಡದ ನಡುವೆ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸತ್ಯವನ್ನು ಜನತೆಯೆದುರು ತರುತ್ತಿದ್ದು, ಅವರ ಸೇವೆ ಅಪಾರ ಎಂದು ಪ್ರಶಂಸಿಸಿದರು.



