ವಿಜಯಸಾಕ್ಷಿ ಸುದ್ದಿ, ರೋಣ: ಶಿಕ್ಷಣ ಕಲಿಯುವಾಗಲೇ ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಆ ಕನಸನ್ನು ನನಸು ಮಾಡಿಕೊಳ್ಳಲು ನಿರಂತರವಾದ ಪರಿಶ್ರಮದ ಜೊತೆಗೆ ಅಭ್ಯಾಸ ಮುಖ್ಯವಾಗುತ್ತದೆ. ಆ ಅಭ್ಯಾಸವನ್ನು ನೀವು ಮುಂದುವರೆಸಿದ್ದಾದಲ್ಲಿ ನಿಮಗೆ ಯಶಸ್ಸು ಖಂಡಿತವಾಗಿ ದೊರಕುತ್ತದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಹೇಳಿದರು.
ತಾಲೂಕಿನ ಮೆಣಸಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ವಿವಿಧ ಕಾಮಗಾರಿಗಳ ಕಡತ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ರಾತ್ರಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ವಸತಿಯಲ್ಲಿನ ಕುಂದು ಕೊರತೆ ಸೇರಿದಂತೆ ಊಟದ ಗುಣಮಟ್ಟದ ಕುರಿತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ವಸತಿ ನಿಲಯದ ಮಕ್ಕಳಿಗೆ ಒಂದು ಗಂಟೆಯಲ್ಲಿ ಕಾಲ ಗಣಿತ ವಿಷಯದ ಕುರಿತು ಕ್ಲಾಸ್ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯ ಸಮಯ, ವಿಷಯಗಳ ಆಯ್ಕೆ, ಯಾವ ದಿನ ಪತ್ರಿಕೆಗಳಲ್ಲಿ ಯಾವ ವಿಷಯವನ್ನು ಹೆಚ್ಚು ಅಭ್ಯಾಸ ಮಾಡಬೇಕು, ಮುಂಜಾನೆ ಎಷ್ಟು ಗಂಟೆಗೆ ಅಭ್ಯಾಸ ಪ್ರಾರಂಭಿಸಬೇಕು ಹೀಗೆ ಹಲವಾರು ವಿಷಯಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿ, ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಲಹೆ ನೀಡಿದರು.
ತದನಂತರ ವಿದ್ಯಾರ್ಥಿಗಳೊಂದಿಗೆ ಸರತಿ ಸಾಲಿನಲ್ಲಿ ಕುಳಿತು ಉಟ ಮಾಡಿದ ಅವರು, ವಸತಿ ನಿಲಯದ ಮೇಲ್ವಿಚಾರಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲು ಸೂಚಿಸಿದರು. ವಸತಿ ನಿಲಯದ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಿ ಚೆಕ್ಕಬಂದಿ ಮತ್ತು ಉತಾರ ನೀಡಲು ಪಿ.ಡಿ.ಓ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಆಇಔ,ಖಿಅ,ಖಿಂಇ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.



