ಬೆಂಗಳೂರು ಗ್ರಾಮಾಂತರ: ಹೆದ್ದಾರಿಯಲ್ಲಿ ಕಾರಿನ ಸನ್‌ರೂಫ್ ಓಪನ್ ಮಾಡಿಕೊಂಡು ಮಕ್ಕಳನ್ನು ನಿಲ್ಲಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡುತ್ತಿದ್ದ ಚಾಲಕರ ವಿರುದ್ಧ ಹೊಸಕೋಟೆ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಕೋಟೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಸನ್‌ರೂಫ್ ತೆರೆದು ಅದರೊಳಗೆ ಮಕ್ಕಳನ್ನು ನಿಲ್ಲಿಸಿಕೊಂಡು ಸಾಗುತ್ತಿದ್ದ ದೃಶ್ಯ ಸಂಚಾರಿ ಪೊಲೀಸರ ಗಮನಕ್ಕೆ ಬಂದಿದೆ. ಸಾರ್ವಜನಿಕರ ಜೀವ ಮತ್ತು ಮಕ್ಕಳ ಸುರಕ್ಷತೆಗೆ ಭಾರೀ ಅಪಾಯ ಉಂಟುಮಾಡುವ ರೀತಿಯ ಚಾಲನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣವೇ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ಸಂಚಾರಿ ಪೊಲೀಸರು, ಚಾಲಕನ ವಿರುದ್ಧ ನಿಯಮ ಉಲ್ಲಂಘನೆಯಡಿ ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇಂತಹ ಅಪಾಯಕಾರಿ ಚಾಲನೆಗಳು ಗಂಭೀರ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸಕೋಟೆ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



