ವಿಜಯಸಾಕ್ಷಿ ಸುದ್ದಿ, ಧಾರವಾಡ : ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ವೇಳಾಪಟ್ಟಿಯನ್ನು ಘೋಷಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ಇವರು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಂತೆ ಚುನಾವಣಾ ಕಾರ್ಯಗಳನ್ನು ಕೈಗೊಂಡು ನಿಗದಿತ ಅವಧಿಯಲ್ಲಿ ಚುನಾವಣಾ ಮಾಹಿತಿಯನ್ನು ಆದ್ಯತೆ ಮೇರೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಅವಶ್ಯವಿರುತ್ತದೆ.
ಈಗಾಗಲೇ ಸಾಕಷ್ಟು ಬಾರಿ ಈ ಕುರಿತು ತಿಳಿಸಿದಾಗ್ಯೂ ಸಹ ಕೆಲ ಅಧಿಕಾರಿಗಳು ವಿಡಿಯೋ ಸಂವಾದ, ಸಭೆಗೆ ಹಾಜರಾಗಲು ತಿಳಿಸಿದ ವೇಳೆಯಲ್ಲಿ ಹಾಜರಾಗದೇ ಗೈರು ಉಳಿಯುತಿದ್ದು, ಮೊಬೈಲ್ ಸಂಪರ್ಕ, ವಾಟ್ಸ್ಆಪ್ ಸಂದೇಶ ಹಾಗೂ ಕಚೇರಿ ದೂರವಾಣಿಯ ಸಂಪರ್ಕಕ್ಕೂ ಕೆಲವು ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿರುವುದಿಲ್ಲ.
ಧಾರವಾಡ ಲೋಕಸಭಾ 11ನೇ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಚುನಾವಣಾ ಕರ್ತವ್ಯ ಪೂರ್ಣಗೊಳ್ಳುವವರೆಗೆ ಎಲ್ಲ ಸಮಯದಲ್ಲಿಯೂ ಮೊಬೈಲ್ ಸಂಪರ್ಕ, ವಾಟ್ಸ್ಆಪ್ ಸಂದೇಶ ಹಾಗೂ ಕಚೇರಿ ದೂರವಾಣಿಯ ಸಂಪರ್ಕದಲ್ಲಿ ಲಭ್ಯವಿದ್ದು, ಕಾರ್ಯಾಲಯದಿಂದ ಚುನಾವಣೆಗೆ ಸಂಬಂಧಿಸಿದಂತೆ ಕೋರುವ ಮಾಹಿತಿಯನ್ನು ಆದ್ಯತೆ ಮೇರೆಗೆ ತಯಾರಿಸಿ, ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಕೋರಿರುವ ಮಾಹಿತಿಯನ್ನು ತುರ್ತು ಸಲ್ಲಿಸಲು ಅಗತ್ಯ ಕ್ರಮವಹಿಸಿ ಚುನಾವಣೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ಜರುಗಿಸಿ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.