ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶಿಕ್ಷಣವೆಂದರೆ ಕೇವಲ ಓದಿ-ಬರೆಯುವುದನ್ನು ಮಾತ್ರ ಕಲಿಸುವುದಿಲ್ಲ. ಬದಲಾಗಿ ವ್ಯಕ್ತಿಯಲ್ಲಿ ಜ್ಞಾನವನ್ನು ಮೂಡಿಸುವುದಲ್ಲದೇ ನಮ್ಮ ವರ್ತನೆ, ನಡವಳಿಕೆ, ಕೌಶಲ್ಯ, ಬದುಕುವ ಕಲೆ, ಸಂಸ್ಕೃತಿಯನ್ನು ವಿದ್ಯಾರ್ಥಿಗಳ ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವರನ್ನಾಗಿ ಮಾಡುವುದೇ ಶಿಕ್ಷಣದ ನಿಜವಾದ ಅರ್ಥವಾಗಿದೆ ಎಂದು ಗದಗ ಪೊಲೀಸ್ ಉಪ ಅಧೀಕ್ಷಕರಾದ ಜೆ.ಎಚ್. ಇನಾಮದಾರ ಹೇಳಿದರು.
ಇಲ್ಲಿಯ ಬಿ.ಎಚ್. ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಶ್ರದ್ಧೆಯಿಂದ, ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಾಗಿದೆ. ಪೊಲೀಸರೆಂದರೆ ಶಾಸಕಾಂಗ ಹಾಗೂ ನ್ಯಾಯಾಂಗದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವವರಾಗಿರುತ್ತಾರೆ. ಹಾಗಾಗಿ ಪೊಲೀಸ್ ಎಂದರೆ ಭಯ ಬೇಡ. ಎಲ್ಲರೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವದರ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ಶಿರೋಳದ ಜ.ತೋಂಟದಾರ್ಯ ಐಟಿಐ ಕಾಲೇಜಿನ ಉಪನ್ಯಾಸಕರಾದ ವೀರನಗೌಡ ಮರಿಗೌಡ್ರ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ಸಮಸ್ಯೆ, ಸವಾಲುಗಳು ಬಂದರೂ ಅದನ್ನು ಮೆಟ್ಟಿನಿಂತು ಓದುವ ಕಡೆಗೆ ಗಮನ ಹರಿಸಿದರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಓದು-ಬರಹದ ಜೊತೆಗೆ ಸ್ವಾಮಿ ವಿವೇಕಾನಂದರು, ಅನಕೃ, ಪ್ಲೇಟೋ, ಸಾಕ್ರೇಟಿಸ್, ಮಹಾತ್ಮ ಗಾಂಧೀಜಿಯವರ ಉದಾತ್ತ ಚಿಂತನೆಗಳನ್ನು ಮೈಗೂಡಿಕೊಳ್ಳುವದರ ಮೂಲಕ ಉತ್ತಮ ಶಿಕ್ಷಣವನ್ನು ಪಡೆಯುವ ಕಡೆ ಗಮನ ಹರಿಸಬೇಕು ಎಂದರು.
ನಿರ್ದೇಶಕರಾದ ವ್ಹಿ.ವ್ಹಿ. ಗಂಧದರವರು ಮಾರ್ಚ್-2024ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದರು. ನಿರ್ದೇಶಕರಾದ ಕೆ.ಎಂ. ಪಾಟೀಲ, ಟಿ.ಎನ್. ಅಂಬಕ್ಕಿ ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮಂಜಪ್ಪ ಜಟ್ಟೇರ, ಮಾರುತಿ ಮೆತ್ತಗಲ್, ಶರಣಬಸವ ಹರಿಜನ, ಪ್ರವೀಣ, ದ್ಯಾಮಣ್ಣ ಲಮಾಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಾಚಾರ್ಯ ಬಿ.ವ್ಹಿ. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಸ್. ಚವಡಿ ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಜೆ.ಎಸ್. ಮುಳಗುಂದಮಠ ನಿರೂಪಿಸಿದರು. ಜೆ.ಜಿ. ಮಕಾನದಾರ ವಂದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಆಯ್.ಎನ್. ಕುಂಬಾರ, ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಯೊಂದಿಗೆ ಓದುವದರ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೆ ಯೋಗ-ಧ್ಯಾನದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.