ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನೌಕರಿ ಖಾಸಗಿಯಾಗಿರಲಿ, ಸರಕಾರದ್ದೇ ಆಗಿರಲಿ. ದುಡಿಯುವವರು ಶ್ರದ್ಧೆ, ಪ್ರಾಮಾಣಿಕೆತಯಿಂದ ದುಡಿದರೆ ಅವರಿಗೆ ಸಮಾಜದಲ್ಲಿ ಉತ್ತಮ ಹೆಸರು ಕಟ್ಟಿಟ್ಟ ಬುತ್ತಿ. ಅಂತಹ ಹೆಸರನ್ನು ಇಂದು ನಿವೃತ್ತರಾಗುತ್ತಿರುವ ಎಸ್.ಎಚ್. ಭಜಂತ್ರಿಯವರು ತಾವು ಕೆಲಸ ಮಾಡಿದ ಕಡೆಯಲ್ಲೆಲ್ಲ ಸಂಪಾದಿಸಿದ್ದಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ವೀರಪ್ಪಜ್ಜನವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಕೆಪಿಟಿಸಿಲ್ ಕಿರಿಯ ಅಭಿಯಂತರ ಎಸ್.ಎಚ್. ಭಜಂತ್ರಿಯವರ ಸೇವಾ ನಿವೃತ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಜಂತ್ರಿಯವರು ತಮ್ಮ ಸೇವೆಯ ಮೂಲಕ ಜನಾನುರಾಗಿಯಾದವರು. ತಮ್ಮ ಸೇವಾವಧಿಯಲ್ಲಿ ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳದೆ, ಬಂದವರು ಚಿಕ್ಕವರು-ದೊಡ್ಡವರು ಎನ್ನುವ ಬೇಧವಿಲ್ಲದೆ ಎಲ್ಲರನ್ನೂ ಸಮನಾಗಿ ಕಂಡು ತಮ್ಮ ಸೇವೆ ಪೂರೈಸಿದರು. ಗಡಿಯಾರಕ್ಕೆ ಅಂಟಿಕೊಂಡು ಕೆಲಸ ಮಾಡದೆ ಕರ್ತವ್ಯದ ಕರೆ ಬಂದಾಗ ತಪ್ಪದೆ ಹಾಜರಾಗಿ ಅದನ್ನು ನಿರ್ವಹಿಸಿದ ರೀತಿ ನರೇಗಲ್ಲ ಮತ್ತು ಸುತ್ತಲಿನ ಜನರ ಮನಸ್ಸನ್ನು ಗೆದ್ದಿದೆ. ಅವರ 39 ವರ್ಷಗಳ ಸೇವಾವಧಿಯಲ್ಲಿ ಸಾಥ್ ನೀಡಿದ ಅವರ ಶ್ರೀಮತಿಯವರೂ ಸಹ ಅಭಿನಂದನಾರ್ಹರು ಎಂದರು.
ಸಭೆಯನ್ನುದ್ದೇಶಿಸಿ ಮಹೇಶ ಕ್ಯಾದಗುಂಪಿ, ಯೋಗೀಶ ನಟಗಾರ, ಪ್ರಕಾಶ ಬಾರಕೇರ, ಎಸ್.ಎಸ್. ಭಜಂತ್ರಿ, ಹೇಮಂತ ಕುಲಕರ್ಣಿ, ನಿವೃತ್ತ ಇಂಜಿನಿಯರ್ ಬಾಗಲಕೋಟೆ, ರೋಣ ಎಇಇ ವೀರೇಶ ರಾಜೂರ ಮುಂತಾದವರು ಮಾತನಾಡಿದರು. ಎಇಇ ಗದಗ ಗೀತಾ ಬಂಕದಮನಿ ಅಧ್ಯಕ್ಷತೆ ವಹಿಸಿದ್ದರು.
ಸೇವಾವಧಿಯಲ್ಲಿ ತಮಗೆ ಸಕಲ ಸಹಕಾರ ನೀಡಿದ ಸರ್ವರನ್ನೂ ಭಜಂತ್ರಿ ಕೃತಜ್ಞತೆಯಿಂದ ಸ್ಮರಿಸಿದರು. ಸಮಾರಂಭದಲ್ಲಿ ಭಜಂತ್ರಿ ದಂಪತಿಗಳನ್ನು ಸನ್ಮಾನಿಸಲಾಯಿತು. ಎಂ.ಆರ್. ಭಗವತಿ ಪ್ರಾರ್ಥಿಸಿದರು. ಆನಂದ ಮಠದ ನಿರೂಪಿಸಿದರು. ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


